ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಹಾಕಬೇಕು ಚಿತ್ರದುರ್ಗ; ಜಿಲ್ಲಾಧಿಕಾರಿ ಸಲಹೆ

Mathematics, Technology, Workshop, DDPI
Published on

ಚಿತ್ರದುರ್ಗ: ಹತ್ತನೇ ತರಗತಿ ಫಲಿತಾಂಶದಲ್ಲಿ ಚಿತ್ರದುರ್ಗ, ರಾಜ್ಯದಲ್ಲೇ ನಂ.1 ಸ್ಥಾನಕ್ಕೆ ಲಗ್ಗೆ ಹಾಕಬೇಕು. ಅದಕ್ಕೆ ಪೂರಕವಾಗಿ ಶಿಕ್ಷಕರು ಪರಿಣಾಮಕಾರಿ ಬೋಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸಲಹೆ ನೀಡಿದರು.

ತ.ರಾ.ಸು ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಂತ್ರಜ್ಞಾನದ ಮೂಲಕ ಗಣಿತ ಬೋಧನೆ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತಾಡಿ, ಶಿಕ್ಷಣದ ಗುಣಮಟ್ಟ ಹಾಗೂ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚು ಶ್ರಮ ವಹಿಸಬೇಕು. ಮುಂದಿನ ವರ್ಷ ನಂ.1 ಸ್ಥಾನದ ಗುರಿ ತಲುಪಬೇಕು ಎಂದು ತಿಳಿಸಿದರು.

ಗಣಿತ ಸಂಪನ್ಮೂಲ ವ್ಯಕ್ತಿ ಬಸವರಾಜ್ ಉಮ್ರಾಣಿ ಮಾತನಾಡಿ, ಗಣಿತ ಕಲಿಕೆಯಲ್ಲಿ ಏಕಾಗ್ರತೆ ತುಂಬ ಮುಖ್ಯ. ಯೋಗ, ಧ್ಯಾನ, ಪ್ರಾಣಾಯಾಮ ಮಾಡುವ ಮೂಲಕ ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು ಎಂದರು.

ಗಣಿತ ವಿಷಯ ಕಬ್ಬಿಣದ ಕಡೆಲೆಯಲ್ಲ. ಇದು ಅನ್ವಯಿಕ ವಿಷಯವಾಗಿ ಪ್ರತಿ ಕ್ಷೇತ್ರದಲ್ಲೂ ಬಳಕೆ ಆಗುತ್ತದೆ. ಉತ್ತಮ ಜ್ಞಾನ ನಮ್ಮನ್ನು ಕ್ರಿಯಾಶೀಲ ಯೋಚನೆಗೆ ಪ್ರೇರೇಪಿಸುತ್ತದೆ ಎಂದು ತಿಳಿಸಿದರು.

ಶಾಲಾ ಮಕ್ಕಳು ಟಿವಿ, ಮೊಬೈಲ್ ಅವಶ್ಯಕತೆಗೆ ತಕ್ಕಂತೆ ಬಳಸಬೇಕು. ಶಿಕ್ಷಕರು ಮಕ್ಕಳಿಗೆ ಯಾವ ರೀತಿ ಗಣಿತ ಪರಿಕಲ್ಪನೆಗಳನ್ನು ಅರ್ಥೈಸಬಹುದು ಎಂಬುದನ್ನು ತಿಳಿದು ಬೋಧಿಸಬೇಕು ಎಂದರು.

ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಮಾತನಾಡಿ, ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ. ಪ್ರತಿ ದಿನವೂ ಶಿಕ್ಷಣದಲ್ಲಿ ಹೊಸ, ಹೊಸ ರೀತಿ ಕಲಿಕೆ ಮಾಡುತ್ತಲೇ ಇರುತ್ತೇವೆ. ಕೋವಿಡ್ ವೇಳೆ ಶಿಕ್ಷಕರು ಪ್ರಾಣ ಲೆಕ್ಕಿಸದೆ ನಿರಂತರ ಕಾರ್ಯದಲ್ಲಿ ತೊಡಗಿದ್ದರು ಎಂದು ಶ್ಲಾಘಿಸಿದರು. ಅಂಬೇಡ್ಕರ್ ಅವರು ಶಿಕ್ಷಣದ ಮೂಲಕವೇ ಸಂವಿಧಾನ ಶಿಲ್ಪಿಯಾದರು. ನಮಗವರು ಆದರ್ಶರಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net