

ವಿಜಯವಾಣಿ ಸುದ್ದಿಜಾಲ ಧಾರವಾಡ
ಗಣಿತ ಎಲ್ಲ ವಿಷಯಗಳಿಗೆ ತಾಯಿ ಬೇರು. ವಿದ್ಯಾರ್ಥಿಗಳು ಬಾಲ್ಯದಿಂದಲೇ ಗಣಿತದ ಬಗ್ಗೆ ಆಸಕ್ತಿ ಹೊಂದಬೇಕು ಎಂದು ನಿವೃತ್ತ ಉಪನ್ಯಾಸಕ ಕೆ.ಜಿ. ದೇವರಮನಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ನಗರದ ಕೆ.ಎನ್.ಕೆ ಬಾಲಕಿಯರ ಪ್ರೌಢ ಶಾಲೆಯಲ್ಲಿ ಡಾ. ಶ್ರೀನಿವಾಸ ಶೇಷಪ್ಪ ದಲಾಲ ದತ್ತಿ ಸಂಸ್ಮರಣೆ ಹಾಗೂ ಶ್ರೀರಾಮಾನುಜನ್ ಜನ್ಮದಿನದ ಪ್ರಯುಕ್ತ ಮಂಗಳವಾರ 8ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಗಣಿತ ಒಲಂಪಿಯಾಡ್ ಪರೀಕ್ಷಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀನಿವಾಸ್ ರಾಮಾನುಜನ್ ಸರ್ವಕಾಲಿಕ ಶ್ರೇಷ್ಠ ಗಣಿತ ತಜ್ಞ. ಚಿಕ್ಕ ವಯಸ್ಸಿನಲ್ಲೇ ಗಣಿತದ ಸಮಸ್ಯೆಗಳನ್ನು ಬಿಡಿಸುವ ಚಾಕಚಕ್ಯತೆ ಹೊಂದಿದ್ದರು. ಅಪಾರ ಸ್ಮರಣೆ ಶಕ್ತಿ ಹೊಂದಿದ್ದ ಅವರು ಸಾವಿರಾರು ಪ್ರಮೇಯಗಳನ್ನು ಕಂಡು ಹಿಡಿದಿದ್ದು, ವಿಶ್ವದಾದ್ಯಂತ ಇಂದಿಗೂ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ವಿದ್ಯಾರ್ಥಿಗಳು ಪಠ್ಯ ಪುಸ್ತಕ ಹೊರತುಪಡಿಸಿ ಗಣಿತ ಅಧ್ಯಯನ ಮಾಡಬೇಕು ಎಂದರು.
ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವಿದ್ಯಾರ್ಥಿಗಳು ಗಣಿತದ ಬಗ್ಗೆ ವಿನಾಕಾರಣ ಭಯಪಡಬಾರದು. ಗಣಿತ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಶಕ್ತಿ ಅಧಿಕವಾಗುವುದು. ಗಣಿತ ವಿಷಯ ಬಗ್ಗೆ ಆಸಕ್ತಿ ಅಭಿರುಚಿ ಅಗತ್ಯ. ನಿತ್ಯ ಜೀವನದಲ್ಲಿ ನಾವು ಕಲಿತ ಗಣಿತ ಅಳವಡಿಸಿಕೊಳ್ಳಬೇಕು ಎಂದರು.
ಗೋವರ್ಧನ್ ಭಟ್ಟ ಮಾತನಾಡಿದರು. ಶಾಲೆ ಮುಖ್ಯಾಧ್ಯಾಪಕಿ ಸುಜಾತಾ ಬಾಸೂರ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷೆ ವಿಜೇತ ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಎಂ.ವಿ. ಭಾವಿಕಟ್ಟಿ, ಡಿ.ಆರ್. ದಲಾಲ ದಂಪತಿ, ಇತರರು ಇದ್ದರು. ಗೀತಾ ಯಾಜಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ನೇತ್ರಾವತಿ ಉಪನಾಳ ವಂದಿಸಿದರು.