ಮೈಸೂರಿನಲ್ಲಿ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಜಯಂತಿ

Mathematician Srinivasa Ramanujan's birth anniversary was celebrated in Mysore
Published on

ಮೈಸೂರು: ನಮ್ಮಲ್ಲಿ ಅನೇಕ ಮಂದಿ ಬದುಕಿದ್ದೂ ಸತ್ತಂತಿರುತ್ತಾರೆ. ಕೆಲವರು ಬಹಳ ಅಪರೂಪ ಎನ್ನುವಂತೆ ತಮ್ಮ ಅದ್ಭುತ ಸಾಧನೆಯಿಂದ ಸಾವಿನ ನಂತರವೂ ಜಗತ್ತು ಇರುವ ತನಕವೂ ಶಾಶ್ವತವಾಗಿ ಬದುಕಿರುತ್ತಾರೆ. ಅಂಥವರಲ್ಲಿ ಮೊದಲ ಸಾಲಿನಲ್ಲೇ ಇರುವವರು ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.

ನಗರದ ಡಿ.ಬನುಮಯ್ಯ ಬಾಲಕರ ಪ್ರೌಢ ಶಾಲೆ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ಸಂಯುಕ್ತಾಶ್ರಯದಲ್ಲಿ ಶಾಲಾ ಆವರಣದಲ್ಲಿ ಶುಕ್ರವಾರ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವ ಉದಯವಾದ ಕಾಲದಿಂದಲೂ ಅದರೊಟ್ಟಿಗೆ ಗಣಿತವೂ ಆರಂಭವಾಗಿ ಸಾಗಿ ಬಂದಿದೆ. ಪ್ರತಿಯೊಂದಕ್ಕೂ ಗಣಿತದ ಲೆಕ್ಕಾಚಾರ ಬೇಕೇ ಬೇಕು, ಗಣಿತವಿಲ್ಲದೆ ಬದುಕಿಲ್ಲ. ಗಣಿತವನ್ನು ಕಲಿತವರಿಗೆ ಉಳಿದ ವಿಷಯಗಳೆಲ್ಲ ನೀರು ಕುಡಿದಷ್ಟು ಸುಲಭ. ಆದ್ದರಿಂದ ವಿದ್ಯಾರ್ಥಿಗಳು ರಾಮಾನುಜನ್ ಅವರಂತಹ ಗಣಿತಜ್ಞ ಮಹನೀಯರ ಬದುಕನ್ನು ಮಾದರಿಯಾಗಿಟ್ಟುಕೊಂಡು ಗಣಿತದ ಬಗ್ಗೆ ವಿಶೇಷ ಆಸಕ್ತಿ ಮತ್ತು ಒಲವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗಣಿತ ಬಹಳ ಕಷ್ಟ ಎಂಬ ಭಾವನೆ ಬಹಳಷ್ಟು ಮಂದಿಯಲ್ಲಿದೆ. ಆದರೆ ಕನಸು ಮನಸ್ಸಿನಲ್ಲೆಲ್ಲ ಅಂಕಿ ಸಂಖ್ಯೆಗಳನ್ನೇ ತುಂಬಿಕೊಂಡು ಗಣಿತವನ್ನೇ ಉಸಿರಾಗಿಸಿಕೊಂಡ ಶ್ರೀನಿವಾಸ ರಾಮಾನುಜನ್ ಬಗ್ಗೆ ಅರಿತವರಾರೂ ಗಣಿತವನ್ನು ಕಬ್ಬಿಣದ ಕಡಲೆ ಅನ್ನುವುದಿಲ್ಲ. ಕೇವಲ ಮೂವತ್ತೆರಡು ವರ್ಷಗಳು ಮಾತ್ರ ಬದುಕಿದ ಅವರು ನೂರು ಜನ್ಮಕ್ಕಾಗುವಷ್ಟು ಗಣಿತ ಸಾಧನೆಯನ್ನು ಮಾಡಿ ಹೋಗಿದ್ದಾರೆ. ಗಣಿತ ಲೋಕದಲ್ಲಿ ಯಾರೂ ಮುರಿಯದಂತಹ ದಾಖಲೆಯನ್ನು ಅವರು ಬರೆದು ಹೋಗಿದ್ದಾರೆ ಎಂದರು.

ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮರಿಮಲ್ಲಪ್ಪ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಎಂ.ಎಲ್. ಧೀರಜ್, ಆರ್. ಪ್ರೀತಮ್, 9ನೇ ತರಗತಿಯ ಕೀರ್ತಿಕ್ ಜೈ, ಎಲ್. ಭಾರ್ಗವ, ಕಿಷನ್‌ಲಾಲ್ ಅವರುಗಳಿಗೆ ಕಲಾವಿದೆ ಡಾ.ಜಮುನಾ ರಾಣಿ ಮಿರ್ಲೆ ಮತ್ತು ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ ಬಹುಮಾನ ವಿತರಿಸಿದರು.

ಈ ಸಂದರ್ಭ ನಿವೃತ್ತ ಗಣಿತ ಶಿಕ್ಷಕ ಎಂ.ಮುತ್ತುಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸಂಖ್ಯಾಶಾಸ್ತ್ರಜ್ಞ ಲೇಖಕ ಎಸ್.ಜೆ.ಸೀತಾರಾಂ, ಡಿ.ಬನುಮಯ್ಯ ಬಾಲಕರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೃಪಾಶಂಕರ್, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ. ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ, ಶಿಕ್ಷಕರಾದ ನಿಂಗರಾಜು, ಕೆ.ಎಂ. ಗೋವಿಂದ ರಾಜು, ಸಿ. ತಾರಾ, ಜಿ. ಗೀತಾ, ಎನ್. ಉಮಾ, ಸರ್. ಎಂ. ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳ ಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಚಂದ್ರೇಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net