

ಬೈಲಹೊಂಗಲ: ಮಠಗಳ ಪರಂಪರೆಯಿಂದ ಭಾರತ ವಿಶ್ವಗುರುವಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿನ ಮೂರುಸಾವಿರ ಮಠದ ನೀಲಕಂಠ ಮಹಾಶಿವಯೋಗೀಶ್ವರ ಜಾತ್ರಾ ಮಹೋತ್ಸವ, ಲಿಂ.ಗಂಗಾಧರ ಸ್ವಾಮೀಜಿ 72ನೇ ಜಯಂತಿ ಮತ್ತು ಮಹಾಶಿವರಾತ್ರಿ ಉತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಠಮಾನ್ಯಗಳಿಗೆ ಯಡಿಯೂರಪ್ಪ ಸರ್ಕಾರ ಅನುದಾನ ನೀಡಿ, ಸಮಾಜಮುಖಿ ಕಾರ್ಯಕ್ಕೆ ಉತ್ತೇಜನ ನೀಡುತ್ತಿತ್ತು. ಬೈಲಹೊಂಗಲಕ್ಕೆ ಮೂರುಸಾವಿರ ಮಠದ ಶೈಕ್ಷಣಿಕ ಸೇವೆ ಅಪಾರ ಎಂದರು.
ಹುಬ್ಬಳ್ಳಿ ಜಗದ್ಗುರು ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಸ್ವಾಮೀಜಿಗಳಿಂದು ಸರ್ಕಾರಕ್ಕೆ ಸಮನಾಗಿ ಸಮಾಜೋದ್ಧಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀಮಠವು ಶಿಕ್ಷಣ, ಆರೋಗ್ಯದಲ್ಲಿ ಮಾದರಿ ಕಾರ್ಯ ಮಾಡುತ್ತಿದೆ ಎಂದರು.
ಮಣಕವಾಡ ಅನ್ನದಾನೇಶ್ವರ ಮಹಾಮಠದ ಅಭಿನವ ಮತ್ಯುಂಜಯ ಸ್ವಾಮೀಜಿ ಮಾತನಾಡಿ, ಮಠಮಾನ್ಯಗಳ ಅಪಾರ ಜನಸೇವೆಯಿಂದ ಭಕ್ತರಿಗೆ ಮಠಗಳ ಮೇಲೆ ನಂಬಿಕೆ ಬಂದಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮಠಗಳು ಆದರ್ಶಪ್ರಾಯವಾಗಿರಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ವೀರಶೈವ ಲಿಂಗಾಯತ ಮಠಗಳು ಶಿಕ್ಷಣದೊಂದಿಗೆ ದಾಸೋಹ ಸೇವೆ ನಡೆಸುತ್ತಿವೆ. ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಶ್ರೀಮಠವು ಆಸರೆಯಾಗಿದೆ ಎಂದು ಹೇಳಿದರು.
ಮರೇಗುದ್ದ ಅಡವಿಸಿದ್ದೇಶ್ವರ ಮಠದ ನಿರುಪಾದೀಶ ಸ್ವಾಮೀಜಿ ನೀಲಕಂಠ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಸಾಹಿತ್ಯಾಭಿರುಚಿ ಅಳವಡಿಸಿಕೊಳ್ಳಬೇಕು ಎಂದರು. ಮುರಗೋಡ ನೀಲಕಂಠ ಸ್ವಾಮೀಜಿ ಮಾತನಾಡಿ, ಶ್ರೀಮಠದ ಗಂಗಾಧರ ಪೂಜ್ಯರು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸಮಾಜಕ್ಕೆ ಅರ್ಪಿಸಿದ್ದಾರೆ ಮಹಾನುಭಾವ ಎಂದು ತಿಳಿಸಿದರು.
ಮಾಜಿ ಸಚಿವ ವೆಂಕಟರಾವ ನಾಡಗೌಡರ, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ ಬಾಬು ಮಾತನಾಡಿದರು. ಹರ್ಲಾಪುರ ಪ್ರವಚನಕಾರ ಸದಾಶಿವ ಸ್ವಾಮೀಜಿ ಹಾಗೂ ಸಂಗೀತ ಸೇವಕರನ್ನು ಸನ್ಮಾನಿಸಲಾಯಿತು. ಪ್ರಭುನೀಲಕಂಠ ಸ್ವಾಮೀಜಿ ನೇತತ್ವ ವಹಿಸಿದ್ದರು. ಹೊಸೂರ ಗಂಗಾಧರ ಸ್ವಾಮೀಜಿ, ಮುನವಳ್ಳಿ ಮುರುಘೇಂದ್ರ ಸ್ವಾಮೀಜಿ, ವೀರಯ್ಯ ಸ್ವಾಮೀಜಿ, ಕಮತೆನಹಟ್ಟಿ ಗುರುದೇವರು, ಲಿಂಗನಾಯಕನಹಳ್ಳಿ ನಿರಂಜನ ದೇವರು, ಕುಲವಳ್ಳಿ ಮಲ್ಲಿಕಾರ್ಜುನ ದೇವರು, ಬೈಲವಾಡ ಶಂಕರ ದೇವರು, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಕೆಎಲ್‌ಇ ಉಪಾಧ್ಯಕ್ಷ ಬಸವರಾಜ ತಟವಾಟಿ, ನಿರ್ದೇಶಕ ಎಸ್.ಸಿ. ಮೆಟಗುಡ್ಡ, ಶಂಕರ ಮಾಡಲಗಿ, ಶ್ರೀಶೈಲ ಶರಣಪ್ಪನವರ, ಪ್ರಾಚಾರ್ಯ ಎನ್.ಎಸ್. ಚಿಲಮೂರ ಇತರರಿದ್ದರು.