

ಕುಶಾಲನಗರ:
ಕುಶಾಲನಗರ ತಾಲೂಕು ತೊರೆನೂರು ವಿರಕ್ತ ಮಠದಲ್ಲಿ ಭಾನುವಾರ (ಫೆ.23) ಶ್ರೀಮಠದ ಆದಿ ಗುರು ಮರುಳ ಸಿದ್ದೇಶ್ವರ ಶ್ರೀ ಹಾಗೂ ಮಹಾಂತ ಸ್ವಾಮೀಜಿಗಳ ಪುಣ್ಯಾರಾಧನೆ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಶ್ರೀಮಠದಲ್ಲಿ ಮನೇಹಳ್ಳಿ ತಪೋವನದ ಶ್ರೀ ಗುರುಸಿದ್ದವೀರೇಶ್ವರ ಸ್ವಾಮಿ ಪೂಜಾ ಕಾರ್ಯಕ್ರಮವೂ ನಡೆಯಲಿದೆ.
12ನೇ ಶತಮಾನದಲ್ಲಿ ಶ್ರೀ ಬಸವೇಶ್ವರರು ಹಚ್ಚಿದ ಜ್ಞಾನ ಜ್ಯೋತಿ ಬೆಳಗಿಸಿದ ಮಹಾಯತಿಗಳಾದ ಶ್ರೀ ಯಡಿಯೂರು ತೋಂಟದ ಸಿದ್ದಲಿಂಗೇಶ್ವರರು ಬಸವಾದಿ ಶರಣರ ಆಶಯ ಹಾಗೂ ತತ್ವ ಸಿದ್ದಾಂತಗಳನ್ನು ಧರ್ಮ ಪ್ರಚಾರದ ಮೂಲಕ ಪಸರಿಸುತ್ತಾ ಅಪೂರ್ವ ವನಸಿರಿಯ ಕಾಫಿ ನಾಡು ಕೊಡಗಿಗೂ ಪಾದಾರ್ಪಣೆ ಮಾಡಿದ್ದರು ಎನ್ನಲಾಗಿದೆ.
ಶ್ರೀ ಸಿದ್ದಲಿಂಗೇಶ್ವರರು ಪಾದವಿಟ್ಟು ಪವಿತ್ರಗೊಳಿಸಿದ ಪುಣ್ಯಭೂಮಿ ಕಾವೇರಿ ನದಿ ತೀರದಲ್ಲಿ ನೆಲೆಗೊಂಡ ತೊರೆನೂರಿನ ಸುಕ್ಷೇತ್ರ ಶ್ರೀ ವಿರಕ್ತ ಮಠವಾಗಿದೆ. ಶ್ರೀ ಯಡಿಯೂರು ಸಿದ್ದಲಿಂಗೇಶ್ವರರ ಶಿಷ್ಯ ಪರಂಪರೆಯ ಶ್ರೀ ಮರುಳಸಿದ್ದೇಶ್ವರರು ಶ್ರೀ ಮಠದ ಮೂಲ ಪುರುಷರಾಗಿದ್ದಾರೆ.
ಪರಮ ತಪೋಧನರು, ನಿಗ್ರಹಾನುಗ್ರಹ ಸಂಪನ್ನರು ಆದ ಶ್ರೀ ಮರುಳ ಸಿದ್ದೇಶ್ವರರು ತಮ್ಮ ಜೀವಿತಾವಧಿಯಲ್ಲಿ ತೋರಿದ ಲೀಲೆಗಳು ಅಗಣಿತವಾದ ಜನರ ಮನದಲ್ಲಿ ಪವಾಡವೆನಿಸಿಕೊಂಡಿವೆ.
ತುAಬಿ ಹರಿಯುತ್ತಿದ್ದ ಕಾವೇರಿ ನದಿಯನ್ನು ಅಂಬಿಗನ ಸಹಾಯವಿಲ್ಲದೆ ಬಾಳೆ ಎಲೆಯ ಮೇಲೆ ಕುಳಿತು ಶ್ರೀಗಳು ದಡ ಸೇರಿದರು ಎನ್ನಲಾದ ಐತಿಹ್ಯ ಈ ಭಾಗದಲ್ಲಿದೆ.
ಶ್ರೀ ಮರುಳಸಿದ್ದೇಶ್ವರರ ಭವ್ಯ ಪರಂಪರೆಯನ್ನು ಶ್ರೀಮಠದಲ್ಲಿ ಅನೇಕ ಪೂಜ್ಯರು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಶ್ರೀ ಚನ್ನಮಲ್ಲಪ್ಪ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ನಂತರ ಅಧಿಕಾರಕ್ಕೆ ಬಂದ ಗುರುಲಿಂಗಸ್ವಾಮಿಗಳು ತಮ್ಮ ಉತ್ತರಾಧಿಕಾರಿಯಾಗಿ ಲಿಂಗೈಕ್ಯ ಶ್ರೀ ಮಹಾಂತ ಸ್ವಾಮಿಗಳನ್ನು ನಿಯೋಜಿಸಿಕೊಂಡಿದ್ದರು. ಈಗ ಶ್ರೀ ಮಲ್ಲೇಶ ಸ್ವಾಮೀಜಿ ಶ್ರೀ ಮಠದ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ.
ಕಾವೇರಿ ನದಿ ದಂಡೆಯಲ್ಲಿರುವ ಸುಕ್ಷೇತ್ರದಲ್ಲಿ ಭಾನುವಾರ ( ಫೆ.23 ) ಮೂಲ ಗುರು ಶ್ರೀ ಮರುಳ ಸಿದ್ದೇಶ್ವರ ಹಾಗೂ ಮಹಾಂತ ಸ್ವಾಮಿಗಳ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕೊಡಗು ಸೇರಿದಂತೆ ವಿವಿಧೆಡೆಗಳಿಂದ 20 ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳು ಆಗಮಿಸುತ್ತಿದ್ದಾರೆ.