ನಿರಂತರ ಸಾಧನೆಯಿಂದ ಯಶಸ್ಸು ಲಭ್ಯ

13 HNL
Published on

ಹೊನ್ನಾಳಿ: ಭಕ್ತಿ, ಪ್ರೀತಿಯಿಂದ ಮಾಡುವ ಎಲ್ಲ ಕೆಲಸಗಳು ದೇವರಿಗೆ ಸಮರ್ಪಿತವಾಗುತ್ತವೆ. ಅಂತೆಯೇ ನಿರಂತರ ಸಾಧನೆಯಿಂದ ದೊರಕುವ ಯಶಸ್ಸು ಕೂಡ ಸಾಧಕನ ಸ್ವತ್ತಾಗುತ್ತವೆ ಎಂದು ಕುಪ್ಪೇಲ್ಲೂರು ಸಿದ್ಧಾರೋಢ ಮಠದ ಪ್ರಿಯಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ಭರತ ಹುಣ್ಣಿಮೆ ಹಿನ್ನೆಲೆ ಗ್ರಾಮದ ಶ್ರೀ ಮಾಯಾಂಬಿಕಾದೇವಿ ದೇವಸ್ಥಾನದ ಜೀಣೋದ್ಧಾರ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 9 ನೇ ವರ್ಷದ ಭರತ ಹುಣ್ಣಿಮೆ ಶ್ರೀ ದೇವಿಯ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಹಾಲುಮತ ಸಮಾಜದ ನಿವೃತ್ತ ಸರ್ಕಾರಿ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀಮಾಯಾಂಬಿಕಾ ದೇವಿ ಶಕ್ತಿ ದೇವತೆಯ ಒಂದು ರೂಪ. ಅಲ್ಲದೆ ನಂಬಿದ ಭಕ್ತರನ್ನು ಮಾತೃಸ್ವರೂಪಿಣಿಯಾಗಿ ಆಶೀರ್ವದಿಸುವ ದೇವಿ. ಇಂತಹ ದೇವಿಯ ಉತ್ಸವವನ್ನು ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಾಗಿ ಆಚರಿಸುತ್ತಿರುವುದು ಯಕ್ಕನಹಳ್ಳಿ ಗ್ರಾಮದ ಜನರ ಸಂಸ್ಕಾರಕ್ಕೆ ಉದಾಹರಣೆಯಾಗಿದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಶ್ರೀಮಾಯಾಂಬಿಕಾದೇವಿ ಸಮುದಾಯ ಭವನ ನಿರ್ವಣಕ್ಕೆ ಶಾಸಕರೊಂದಿಗೆ ಮಾತನಾಡಿ ಅನುದಾನ ಮಂಜೂರು ಮಾಡಿಸಿಕೊಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಎಂ. ಜಯಪ್ಪ ಮಾತನಾಡಿ, ಒಂದು ಸಮಾಜ ಅಥವಾ ವರ್ಗ ಅಭಿವೃದ್ಧಿ ಹೊಂದಬೇಕಾದರೆ ಉತ್ತಮ ಶಿಕ್ಷಣ ಪಡೆಯಬೇಕಾಗುತ್ತದೆ. ಯಕ್ಕನಹಳ್ಳಿ ಗ್ರಾಮದ ಜನತೆ ಹಿಂದಿನಿಂದಲೂ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಒಲವು ತೋರಿದ ಪರಿಣಾಮ ಇಂದು ಗ್ರಾಮದ ಬಹುಪಾಲು ಜನ ನಾಡಿನ ವಿವಿಧೆಡೆ ಸರ್ಕಾರಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ತುಮಕೂರು ಜಯಪ್ಪ ಮಾತನಾಡಿ, ಸಂತೆಬೆನ್ನೂರು ಗ್ರಾಮ ವಾಲಿಬಾಲ್ ಹಾಗೂ ಉತ್ತಮ ಶಿಕ್ಷಣದಿಂದಾಗಿ ಗುರುತಿಸಿಕೊಂಡಿದೆ. ಎಲ್ಲರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಮುಖ್ಯ ಎಂದು ಸಲಹೆ ನೀಡಿದರು.

ನಿವೃತ್ತ ನೌಕರರಾದ ಕೆ. ಬಸಪ್ಪ, ಡಿ.ಆರ್. ಬೀರಲಿಂಗಪ್ಪ, ಕೆ.ಎಸ್. ಮಹೇಶ್ವರಪ್ಪ, ಮಹಾಲಿಂಗಪ್ಪ, ಮಹೇಶ್ವರಪ್ಪ ಸಾರಥಿ, ಬಿ.ಐ. ಸಣ್ಣಸಿದ್ದಪ್ಪ, ಕೆ. ಬಸಪ್ಪ, ಸಿ.ಪಿ. ಬಸವರಾಜಪ್ಪ, ಚಂದ್ರಪ್ಪ, ಜಯಪ್ಪಮಾಕನೂರು, ರುದ್ರಪ್ಪ, ಕೆ.ಜಿ. ಬಸವರಾಜಪ್ಪ, ಯಲ್ಲಪ್ಪ, ಮಂಜಪ್ಪ, ಹಳದಪ್ಪ, ರಾಜಪ್ಪ, ಕೆ. ಕತಜಿ. ರೇವಣಸಿದ್ದಪ್ಪ ಹಾಲೆಕಲ್ಲು, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಎಸ್. ಶಿವಪ್ರಕಾಶ್, ಕೆ.ಎಸ್. ಶಿವಪ್ರಕಾಸ್ ಇತರರನ್ನು ಸನ್ಮಾನಿಸಲಾಯಿತು.

ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಹಂಚಿನಮನೆ ರುದ್ರಪ್ಪ ಮಾತನಾಡಿದರು. ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆಂಗಲಹಳ್ಳಿ ಷಣ್ಮುಖಪ್ಪ, ತಾ. ಕುರುಬ ಸಮಾಜದ ಗೌರವಾಧ್ಯಕ್ಷ ಮರುಳಸಿದ್ದಪ್ಪ, ಬಿ.ಸಿ.ಎಂ. ಉಪಾಧ್ಯಕ್ಷ ಎಚ್.ಎ. ಉಮಾಪತಿ, ಅಶೋಕ್ ಉದ್ದಜ್ಜಾರ, ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ದೊಡ್ಡರಂಗಪ್ಪ, ಸತೀಶ್ ಉದ್ದಜ್ಜಾರ, ವೈ.ಕೆ. ದಯಾನಂದ್, ಶಿಕ್ಷಕ ಮಂಜುನಾಥ್ ಸೇರಿ ಅನೇಕ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net