

ಹೊಸದುರ್ಗ: ತಾಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಠದ ಪಟ್ಟಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು 47 ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಕ್ತರು ಬುಧವಾರ ಮಠಕ್ಕೆ ಭೇಟಿ ನೀಡಿ ಸಾಂಕೇತಿಕವಾಗಿ ಶ್ರೀಗಳನ್ನು ಅಭಿನಂದಿಸಿದರು.
ಎಸ್ಎಸ್ಎಲ್ಸಿ ವಿದ್ಯಾಭ್ಯಾಸದ ನಂತರ ಉದ್ಯೋಗಕ್ಕಾಗಿ ಸಿರಿಗೆರೆಯ ಮಠಕ್ಕೆ ಬಂದಿದ್ದ ಕರಿಬಸಯ್ಯ ಅವರನ್ನು ಲಿಂಗೈಕ್ಯ ಜಗದ್ಗುರು ಶಿವಕುಮಾರ ಸ್ವಾಮಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡುವಂತೆ ಪ್ರೇರೆಪಿಸಿ ಓದಲು ಸಹಕಾರ ನೀಡಿದರು.
ಕರಿಬಸಯ್ಯ ಮೈಸೂರು ವಿವಿಯಲ್ಲಿ ಎಂ.ಎ.ವ್ಯಾಸಂಗ ಮಾಡಿ ಚಿನ್ನದ ಪದಕ ಪಡೆದು ಪ್ರಥಮ ರ್ಯಾಂಕ್ ಪಡೆದರು. ನಂತರ ಹಿರಿಯ ಜಗದ್ಗುರುಗಳ ಇಚ್ಛೆಯಂತೆ ಸನ್ಯಾಸ ದೀಕ್ಷೆ ಪಡೆದು ಪಂಡಿತಾರಾಧ್ಯ ಸ್ವಾಮೀಜಿಯಾದರು.
ಡಿಸೆಂಬರ್ 25ರಂದು ಶರಣ ಮಾದಾರ ಚನ್ನಯ್ಯ ಜಯಂತಿಯ ದಿನ ಸಾಣೇಹಳ್ಳಿಯ ಮಠದ ಪಟ್ಟಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ತಮ್ಮ ಪಟ್ಟಾಧಿಕಾರದ ಮಹೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳುವ ಸಂಪ್ರದಾಯವನ್ನು ಹೊಂದಿರದ ಶ್ರೀಗಳನ್ನು ಭಕ್ತರು ಸಾಂಕೇತಿಕವಾಗಿ ಅಭಿನಂದಿಸುವ ರೂಢಿ ಇಟ್ಟುಕೊಂಡಿದ್ದಾರೆ.
ಶಿಥಿಲಾವಸ್ಥೆಯಲ್ಲಿದ್ದ ಶ್ರೀ ಮಠವನ್ನು ಬೌತಿಕವಾಗಿ ಹಾಗೂ ವೈಚಾರಿಕವಾಗಿ ಕಟ್ಟುವ ಮೂಲಕ ಬಸವಾದಿ ಶರಣರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಕ್ಷರ ಜ್ಞಾನ ಒದಗಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಶಿವಕುಮಾರ ಶ್ರೀಗಳು ರಂಗಭೂಮಿಯ ಮೂಲಕ ಬಸವಾದಿ ಶರಣರ ವಿಚಾರಗಳನ್ನು ಹಳ್ಳಿಯ ಜನರಿಗೆ ತಿಳಿಸುವ ಪರಿಣಾಮಕಾರಿ ಮಾರ್ಗವನ್ನು ಕಂಡುಕೊಂಡು ತಾವೇ ಸ್ವತಃ ನಾಟಕಗಳನ್ನು ಬರೆದು ನಿರ್ದೇಶಿಸಿ ನಾಟಕಗಳನ್ನು ಆಡಿಸುತ್ತಿದ್ದರು.
ಗುರುಗಳ ಹಾದಿಯಲ್ಲಿ ಸಾಗಿದ ಪಂಡಿತಾರಾಧ್ಯ ಶ್ರೀಗಳು ಶಿವಕುಮಾರ ಕಲಾಸಂಘವನ್ನು ಕಟ್ಟುವ ಮೂಲಕ ಸಾಣೇಹಳ್ಳಿಯನ್ನು ರಂಗಕಾಶಿಯಾಗಿಸಿದ್ದಾರೆ.
ಶಿವಕುಮಾರ ರಂಗಪ್ರಯೋಗ ಶಾಲೆ, ಗ್ರೀಕ್ ಮಾದರಿಯ ಬಯಲು ರಂಗಮಂದಿರ, ಹವಾನಿಯಂತ್ರಿತ ಒಳಾಂಗಣ ರಂಗಮಂದಿರ ಸೇರಿದಂತೆ ರಂಗಭೂಮಿಯ ಪ್ರಪಂಚವನ್ನೆ ಸಾಣೇಹಳ್ಳಿಯಲ್ಲಿ ಸೃಷ್ಟಿಸಿದ್ದಾರೆ.
ಪ್ರತಿವರ್ಷ ರಾಷ್ಟ್ರೀಯ ನಾಟಕೋತ್ಸವ, ಶಿವಸಂಚಾರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿಶ್ವದ ಕಲಾಸಕ್ತರನ್ನು ಸಾಣೇಹಳ್ಳಿಯತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಬಸವಾದಿ ಶರಣರ ವಿಚಾರಗಳನ್ನು ಸ್ವಯಂ ಆಚರಣೆಗೆ ತಂದು ನುಡಿದಂತೆ ನಡೆದು, ಭಕ್ತರಿಗೂ ನಡೆಯುವ ಹಾದಿಯನ್ನು ತೋರಿಸುತ್ತಿದ್ದಾರೆ. ಮತ್ತೆ ಕಲ್ಯಾಣದ ಮೂಲಕ 12ನೇ ಶತಮಾನದ ಶರಣ ಚಳುವಳಿಗೆ ಮರುಚಾಲನೆ ನೀಡುವ ಕಾರ್ಯ ಮಾಡಿದರು.
ಸತ್ಯ ಹೇಳುವಾಗ ವಿರೋಧಗಳು ಎದುರಾದರೂ ಅವುಗಳನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿ ವಿಚಾರಗಳೊಂದಿಗೆ ರಾಜಿಯಾಗದೆ ಬಸವ ಪಥದಲ್ಲಿ ನಡೆಯುತ್ತಿರುವ ಅಪರೂಪದ ಬಸವತತ್ವದ ಸ್ವಾಮಿಗಳಾಗಿ ಗುರುತಿಸಿಕೊಂಡಿದ್ದಾರೆ.
ಪಟ್ಟಾಧಿಕಾರ ಮಹೋತ್ಸವ ನಡೆದು 47 ವರ್ಷಗಳಾದ ಹಿನ್ನೆಲೆಯಲ್ಲಿ ಬುಧವಾರ ಗ್ರಾಮಸ್ಥರು, ಶಾಲಾ ಕಾಲೇಜುಗಳ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಭಕ್ತರು ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳನ್ನು ಅಭಿನಂದಿಸಿದರು. ಶ್ರೀಗಳು ನಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸಿ ಭಕ್ತರಿಗೆ ಬಸವಾದಿ ಶರಣರ ವಿಚಾರಗಳನ್ನು ತಿಳಿಸಿದರು.