

ಮೈಸೂರು: ಜೆಎಸ್‌ಎಸ್ ಮಹಾ ವಿದ್ಯಾಪೀಠದ 70ನೇ ವರ್ಷಾಚರಣೆ ಹಾಗೂ ವಿಶ್ವ ತಾಯಂದಿರ ದಿನಾಚರಣೆ ಹಿನ್ನೆಲೆಯಲ್ಲಿ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಜೂ.30ರವರೆಗೆ ಹಮ್ಮಿಕೊಂಡಿರುವ ಗರ್ಭಿಣಿ ಮತ್ತು ಹೆರಿಗೆ ಆರೈಕೆ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ತಿಳಿಸಿದರು.
ಅಭಿಯಾನವನ್ನು ಮೇ 24 ರಿಂದ ಪ್ರಾರಂಭಿಸಲಾಯಿತು. ಈ ಅಭಿಯಾನದಲ್ಲಿ ಸಾಮಾನ್ಯ ಹೆರಿಗೆಯನ್ನು ಉಚಿತವಾಗಿ, ಸಿಸೇರಿಯನ್ ಹೆರಿಗೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುತ್ತಿದೆ. ಸಿಸೇರಿಯನ್‌ಗೆ ಶೇ.40 ರಿಂದ 50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಆಸ್ಪತ್ರೆಯಿಂದ 25-30 ಕಿಮೀ ವ್ಯಾಪ್ತಿಯಲ್ಲಿರುವ ಗರ್ಭಿಣಿಯರನ್ನು ಆಂಬ್ಯುಲೆನ್ಸ್‌ನಲ್ಲಿ ಉಚಿತಯಾಗಿ ಆಸ್ಪತ್ರೆ ಕರೆತರಲಾಗುತ್ತಿದೆ. ಸಾಮಾನ್ಯ ವಾರ್ಡ್‌ಗೆ ಮಾತ್ರ ಈ ಸೌಲಭ್ಯ ಇರಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಭಿಯಾನಕ್ಕೆ ಒಟ್ಟು 150 ಹಾಸಿಗೆಯುಳ್ಳ ವಾರ್ಡ್ ಮೀಸಲಿಡಲಾಗಿದೆ. 18 ಪ್ರಸೂತಿ ತಜ್ಞ ವೈದ್ಯರು, 24 ಸ್ನಾತಕೋತ್ತರ ವಿದ್ಯಾರ್ಥಿ ಗಳು ಹಾಗೂ ಅಗತ್ಯಕ್ಕೆ ತಕ್ಕಷ್ಟು ಶೂಶ್ರೂಷಕಿಯರನ್ನು ನೇಮಿಸಲಾಗಿದೆ. ಮೇ 24ರಿಂದ ಮೇ 31ರವರೆಗೆ 53 ಗರ್ಭಿಣಿಯರು ಆಸ್ಪತ್ರೆ ದಾಖಲಾಗಿದ್ದು, ಈ ಪೈಕಿ 22 ಗರ್ಭಿಣಿಯರಿಗೆ ಸಾಮಾನ್ಯ ಹೆರಿಗೆ, 30 ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆ ಮಾಡಿಸಲಾಗಿದ್ದು, ಒಬ್ಬರಿಗೆ ಇನ್ನು ಹೆರಿಗೆ ಆಗಿಲ್ಲ ಎಂದರು.
ಅಗತ್ಯಬಿದ್ದರೆ ಹೆರಿಗೆ ನಂತರ ಬಾಣಂತಿಯರನ್ನು 2-3 ದಿನ ನೋಡಿಕೊಳ್ಳಲು ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಾಗ ತಾಯಿಗೆ ಅಗತ್ಯ ವಸ್ತುವುಳ್ಳ ಕಿಟ್ ನೀಡಲಾಗುವುದು. ಮನೆಗೆ ಬಿಟ್ಟು ಬರಲು ಆಂಬ್ಯುಲೆನ್ಸ್ ಕಾಯ್ದಿರಿಸ ಲಾಗಿದೆ. ಅಭಿಯಾನದ ಸೌಲಭ್ಯ ಪಡೆಯಲು ಬಯಸುವವರು ಮಾಹಿತಿಗೆ ಮೊ: 82966 73241 ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಅಕಾಡೆಮಿ ಕುಲಪತಿ ಡಾ.ಸುರೀಂದರ್ ಸಿಂಗ್, ಜೆಎಸ್‌ಎಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು, ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಎಚ್. ಬಸವನಗೌಡಪ್ಪ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಪ್ರಸೂತಿ ತಜ್ಞೆ ಡಾ. ಮಮತಾ ಇದ್ದರು.