ಹುಬ್ಬಳ್ಳಿ ಘಟನೆಯ ನೈತಿಕ ಹೊಣೆ ಹೊತ್ತುರಾಜ್ಯ ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು - ಸಂಜೀವ ಮಠಂದೂರು

Published on

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಹುಬ್ಬಳ್ಳಿ ಘಟನೆಯ ನೈತಿಕ ಹೊಣೆ ಹೊತ್ತುರಾಜ್ಯ ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು. ನೇಹಾ ಅವರನ್ನು ಬರ್ಬರವಾಗಿ ಹತ್ಯೆ ಮಾಡುವ ಮೂಲಕ ಪ್ರೀತಿಯ ಹೆಸರಿನಲ್ಲಿ ಜಿಹಾದಿ ಮಾನಸಿಕತೆ ಮತ್ತೊಮ್ಮೆ ತಲೆ ಎತ್ತಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ವಿಧಾನಸೌಧದ ಬಳಿ ಪಾಕ್ ಪರ ಘೋಷಣೆ ಕೂಗಿದಾಗ, ಹನುಮಾನ್ ಚಾಲೀಸ್ ಪಠಿಸಿದಾತನ ಮೇಲೆ ಹಲ್ಲೆ ನಡೆದಾಗ, ಜೈಶ್ರೀರಾಮ್ ಘೋಷಣೆ ಮಾಡಿದಾಗ ರಾಜ್ಯ ಸರಕಾರ ಮೃದು ಧೋರಣೆ ತಳೆದಿರುವುದೇ ಇಂತಹ ಸಮಾಜ ದ್ರೋಹಿ ಚಟುವಟಿಕೆಗಳು ನಡೆಯಲು ಪ್ರೇರಣೆಯಾಗಿದೆ. ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಿಸಲು ಮತಾಂಧ ವ್ಯಕ್ತಿ ಯತ್ನಿಸಿದ್ದು, ತನ್ನದೇ ಪಕ್ಷದ ನಾಯಕನ ಮಗಳಿಗೆ ರಕ್ಷಣೆ ನೀಡಲಾಗದ ಕಾಂಗ್ರೆಸ್ ಸರಕಾರ ರಾಜ್ಯದ ಜನಸಾಮಾನ್ಯರಿಗೆ ರಕ್ಷಣೆ ನೀಡೀತೇ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಅಪರಾಧ ಮಾಡುವ ಜಿಹಾದಿ ಮಾನಸಿಕತೆಗಳಿಗೆ ಏನೂ ಮಾಡಿದರೂ ನಡೆಯುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಪುತ್ತೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಚುನಾವಣಾ ಕಾರ್ಯದ ನಿಮಿತ್ತ ಮನೆ ಭೇಟಿ ಮಾಡಿದಾಗ ಅವರ ಮೇಲೆ ಮುಸ್ಲಿಂ ಮಹಿಳೆಯಿಂದ ಹಲ್ಲೆ ಮಾಡುವ ಯತ್ನ ನಡೆದಿದೆ. ಇದೆಲ್ಲ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯದ ಗೃಹ ಸಚಿವ ಪರಮೇಶ್ವರ್ ಅವರು ಅತ್ಯಂತ ದುರ್ಬಲ ಸಚಿವರಾಗಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ಕ್ಷೇತ್ರದ ಚುನಾವಣಾ ಪ್ರಭಾರಿ ಸುಲೋಚನಾ ಭಟ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್. ಗೌರಿ, ಮುಖಂಡ ಅರುಣ್ ಕುಮಾರ್ ಪುತ್ತಿಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net