

ಬೆಂಗಳೂರು: ಸಮಾಜದಲ್ಲಿ ಇನ್ನೂ ನೈತಿಕತೆ ಉಳಿದಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ನಮ್ಮ ಮಠ-ಪೀಠಗಳು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಗುರುಪೂರ್ಣಿಮೆ ಅಂಗವಾಗಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಸಮಾರಂಭವನ್ನು ಉದ್ಘಾಟಿಸಿದ ಅವರು, ನ್ಯಾಯಾಧೀಶರ ಜವಾಬ್ದಾರಿಯನ್ನು ಕಡಿಮೆ ಮಾಡುವ ಕೆಲಸ ಮಠಾಧೀಶರಿಂದ ನಡೆಯುತ್ತಿದೆ. ಭಕ್ತಿ, ಶ್ರದ್ಧೆ, ನಂಬಿಕೆಯನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹೇಳಿದರು.
ನಮ್ಮ ಸಂಸ್ಕೃತಿ ನಮ್ಮ ದೇಶದ ಹಿರಿಮೆ. ಆ ಸಂಸ್ಕೃತಿಯನ್ನು ಗಟ್ಟಿಗೊಳಿಸಲು ಆದಿ ಆಚಾರ್ಯರು, ಬಸವಾದಿ ಶರಣರು ನೀಡಿದ ಸಂದೇಶಗಳೇ ಕಾನೂನು-ಸಂವಿಧಾನದ ರೂಪದಲ್ಲಿ ದೇಶವನ್ನು ಮುನ್ನಡೆಸುತ್ತಿವೆ. ಅಂತಹ ಧರ್ಮಗುರುಗಳ ದರ್ಶನ, ಆಶೀರ್ವಾದ ಪಡೆಯಲು ಗುರುಪೂರ್ಣಿಮೆಯಂತಹ ಸುಸಂದರ್ಭದಲ್ಲಿ ಬೆಂಗಳೂರಿನ ಜನತೆಗೆ ದೊರೆತಿರುವುದು ನಗರದ ಜನತೆಯ ಸೌಭಾಗ್ಯ ಎಂದು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ತಿಳಿಸಿದರು.
ಸಮಾರಂಭದಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ಶ್ರೀಶೈಲ ಜಗದ್ಗುರುಗಳು ಕಾಶೀ ಬನಾರಸ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ಸಿದ್ಧಾಂತ ಶಿಖಾಮಣಿ ಮತ್ತು ಭಗವದ್ಗೀತೆ ಮಹಾಪ್ರಬಂಧದ ಪಿ.ಎಚ್.ಡಿ ಗ್ರಂಥವನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವಿಭೂತಿಪುರ ವೀರಭದ್ರೇಶ್ವರ ವಸತಿ ಶಾಲೆಯ ವಿದ್ಯಾರ್ಥಿಗಳು ಸಿದ್ಧಾಂತ ಶಿಖಾಮಣಿ ಪಾರಾಯಣ ಮಾಡಿದರು. ಕೊನೆಯಲ್ಲಿ ಶ್ರೀಶೈಲ ಜಗದ್ಗುರುಗಳು ಆಧ್ಯಾತ್ಮಿಕ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.