ಪ್ರತಿದಿನ ಹೊಸತನವೆಂದು ಭಾವಿಸಿ ; ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ಧಲಿಂಗಸ್ವಾಮೀಜಿ ಸಲಹೆ

DSC_4115
Published on

ತುಮಕೂರು : ಕರೊನಾ 3ನೇ ಅಲೆಯ ಆತಂಕ ಹೆಚ್ಚಾಗುತ್ತಿರುವ ನಡುವೆಯೂ ಜಿಲ್ಲೆಯಲ್ಲಿ ಹೊಸವರ್ಷ 2022ನ್ನು ಜನರು ಸಂಭ್ರಮದಿಂದ ಸ್ವಾಗತಿಸಿದರು. ಡಿ.31ರ ಮಧ್ಯರಾತ್ರಿ ಆಚರಣೆಗೆ ಸರ್ಕಾರವೇ ಕಡಿವಾಣ ಹಾಕಿದ್ದ ಹಿನ್ನೆಲೆಯಲ್ಲಿ ಶನಿವಾರ ವಿವಿಧ ಪ್ರವಾಸಿ ತಾಣಗಳು, ದೇವಾಲಯಗಳಿಗೆ ಭೇಟಿ ನೀಡಿದರು. ಸಿದ್ಧಗಂಗಾ ಮಠಕ್ಕೂ ಸಾವಿರಾರು ಜನರು ಆಗಮಿಸಿ ಡಾ.ಶಿವಕುಮಾರಸ್ವಾಮೀಜಿ ಗದ್ದುಗೆ ದರ್ಶನ ಪಡೆದರು.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಯುವಜನರು ಸಿದ್ಧಗಂಗಾ ಮಠಕ್ಕೆ ದಿನಪೂರ್ತಿ ಹರಿದುಬಂದರು, ಬೆಟ್ಟದ ಮೇಲೂ ದೇವರ ದರ್ಶನ ಪಡೆದರು. ಈ ಪೈಕಿ ಯುವಜನರ ಸಂಖ್ಯೆಯೂ ಹೆಚ್ಚಾಗಿಯೇ ಇತ್ತು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಸಂತಸ ಹಂಚಿಕೊಂಡ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ಧಲಿಂಗಸ್ವಾಮೀಜಿ, ಪ್ರತಿದಿನವನ್ನೂ ಹೊಸತನವೆಂದು ಭಾವಿಸಬೇಕು, ಒಳ್ಳೆಯ ಕೆಲಸ ಮಾಡುತ್ತ ಸಾಧನೆ ಮಾಡೋಣ. ಅಶಕ್ತರಿಗೆ ಕೈಲಾದಷ್ಟು ಸಹಾಯ ಮಾಡೋಣ ಎಂದು ಆಶಿಸಿದರು.

ಜೀವನ ಸುಖ-ದುಃಖದ ಸಂಗಮ, ಯಾವಾಗಲೂ ಸುಖ ಅಥವಾ ದುಃಖವೇ ಇರುವುದಿಲ್ಲ. ಸುಖ ಮತ್ತು ದುಃಖ ಚಕ್ರದಂತೆ ತಿರುಗುತ್ತಿರುತ್ತದೆ. ಪ್ರತಿಯೊಬ್ಬರಿಗೂ ಆರೋಗ್ಯ ಅತಿ ಮುಖ್ಯ ಹಾಗಾಗಿ, ಆರೋಗ್ಯ ಕಾಪಾಡಿಕೊಳ್ಳುವತ್ತ ಪ್ರತಿಯೊಬ್ಬರೂ ಗಮನ ಹರಿಸೋಣ ಎಂದರು.

ಕಳೆದ 2 ವರ್ಷ ಕರೊನಾ ಮಹಾಮಾರಿಯ ಆರ್ಭಟದಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಈಗಾಗಲೇ 3ನೇ ಅಲೆ ಹೆಸರಲ್ಲಿ ಎಲ್ಲೆಡೆ ಸೋಂಕು ಹೆಚ್ಚಾಗುವ ನಿಟ್ಟಿನಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಬದುಕು ನಡೆಸೋಣ ಎಂದು ಸಲಹೆ ಮಾಡಿದರು.

ದೇವರಾಯನದುರ್ಗ, ನಾಮದಚಿಲುಮೆ, ಮಾರ್ಕೋನಹಳ್ಳಿ, ಗೊರವನಹಳ್ಳಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಜನರು ಭೇಟಿ ನೀಡಿ ಹೊಸವರ್ಷವನ್ನು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net