

13, 14ರಂದು ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ
ಮಂಗಳೂರು : ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಮತ್ತು ದ.ಕ. ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಆಶ್ರಯದಲ್ಲಿ 42ನೆ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಜ. 13ರಂದು 14ರಂದು ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ರೀಡಾಕೂಟವನ್ನು ಜ.13ರಂದು ರಾಜ್ಯ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ. ನಾಗೇಂದ್ರ ಉದ್ಘಾಟಿಸಲಿದ್ದಾರೆ. ರಾಜ್ಯದ 31 ಜಿಲ್ಲೆಗಳ 600ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಐವನ್ ಡಿಸೋಜಾ ಸೋಮವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
30ರಿಂದ 90 ವರ್ಷದವರೆಗಿನ ಮಹಿಳಾ ಮತ್ತು ಪುರುಷ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಜ.13ರಂದು ಪುರುಷರ 5000 ಮೀ., ಮಹಿಳೆಯರ 300 ವಾಕ್, ಟ್ರಿಪಲ್ ಜಂಪ್, ಹೈ ಜಂಪ್, 1500 ಮೀಟರ್ ಓಟ, ಡಿಸ್ಕಸ್ ಎಸೆತ, 100 ಮೀಟರ್ ಓಟ, ಚಾವೆಲಿನ್ ಎಸೆತ, 200 ಮೀಟರ್ ಓಟ, 5000 ಮೀಟರ್ ಪರುಷರ ಓಟ ಹಾಗೂ 3000 ಮೀಟರ್ ಮಹಿಳೆಯರ ಓಟ ನಡೆಯಲಿದೆ. ಜ. 14ರಂದು 10000 ಮೀ ಮಹಿಳೆಯರ ಮತ್ತು ಪುರುಷರ ಓಟ, ಹ್ಯಾಮರ್ ಎಸೆತ, ಲಾಂಗ್ ಜಂಪ್, 800 ಮೀ. ಓಟ, ಶಾಟ್‌ಪುಟ್, ಹೈಜಂಪ್, 400 ಮೀ. ಓಟ, 100 ಮೀ. ಮತ್ತು 80 ಮೀಟರ್ ಹರ್ಡಲ್ಸ್, ರಿಲೇ ಸ್ಪರ್ಧೆಗಳು ನಡೆಯಲಿವೆ ಎಂದು ಅವರು ವಿವರ ನೀಡಿದರು.
ದ.ಕ. ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಜಗದೀಶ್ ಶೆಟ್ಟಿ, ಉಪಾಧ್ಯಕ್ಷೆ ರೇಖಾ ಶೆಟ್ಟಿ, ಕೋಶಾಧಿಕಾರಿ ನಂದ ಕುಮಾರ್, ಮಾಧ್ಯಮ ಸಂಚಾಲಕ ಕಿರಣ್ ಪೈ, ಸಂಘಟನಾ ಕಾರ್ಯದರ್ಶಿ ಪಿ.ಎ. ಮಹಮ್ಮದ್ ಉಪಸ್ಥಿತರಿದ್ದರು.