

ಮೈಸೂರು: ಮಾಸ್ತಿ ಕನ್ನಡಿಗರಿಗೆ ಸದಾ ಆದರ್ಶ. ಕಷ್ಟ ಕಾಲದಲ್ಲೂ ಜೀವನವನ್ನು ಧೈರ್ಯದಿಂದ ಎದುರಿಸಿದರು, ನುಡಿದಂತೆ ನಡೆದರು. ಸಾಹಿತ್ಯ ರಚಿಸಿದಂತೆ ಸಾಹಿತ್ಯ ಪೋಷಕರೂ ಆದರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಬಣ್ಣಿಸಿದರು.
ನಗರದ ರಾಮಾನುಜ ರಸ್ತೆಯಲ್ಲಿರುವ ರಾಜಾರಾಮ್ ಉದ್ಯಾನವನದಲ್ಲಿ ಬುಧವಾರ ವಿಶ್ವ ಮಾನವ ಡಾ.ರಾಜ್‌ಕುಮಾರ್ ಸೇವಾ ಸಮಿತಿ ಹಮ್ಮಿಕೊಂಡಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಜನ್ಮ ದಿನಾಚರಣೆಯಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿ, ಅನೇಕ ಕಾದಂಬರಿ, ಕತೆ ಬರೆದು ಕನ್ನಡ ನಾಡಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾನ್ ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್. ಸಾಹಿತಿಗಳು, ವಿದ್ಯಾರ್ಥಿಗಳು ಅವರನ್ನು ಸ್ಮರಿಸಬೇಕು ಹಾಗೂ ಅವರ ಸಾಹಿತ್ಯವನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.
ಮಾಸ್ತಿ 123 ಕನ್ನಡ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು. ಅದೇ ರೀತಿ 17ಕ್ಕೂ ಹೆಚ್ಚು ಆಂಗ್ಲ ಗ್ರಂಥಗಳನ್ನು ರಚನೆ ಮಾಡಿದ್ದಾರೆ. ಅವರ ಚಿಕ್ಕವೀರರಾಜೇಂದ್ರ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು. 1929ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಎಂದು ಸ್ಮರಿಸಿದರು.
ಅವರ ಕೃತಿಗಳನ್ನು ಪಠ್ಯ ಪುಸ್ತಕಗಳನ್ನಾಗಿ ಪರಿಚಯಿಸಿ ಅವರಿಗೆ ಗೌರವಿಸುವ ಕೆಲಸ ಆಗಬೇಕು. ಅವರು ಹುಟ್ಟಿದ ದಿನಾಂಕ ಹಾಗೂ ನಿಧನ ದಿನಾಂಕ ಜೂ.6 ಇರುವುದರಿಂದ ಆ ದಿನ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡುವ ಮೂಲಕ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಯನ್ನು ಗೌರವಿಸಬೇಕು. ಮಾಸ್ತಿ ಹೆಸರಿನಲ್ಲಿ ಸರ್ಕಾರ ಗ್ರಂಥಾಲಯ ಮತ್ತು ವಸತಿ ಶಾಲೆ ನಡೆಸುತ್ತಿದ್ದು, ಅದು ಮತ್ತಷ್ಟು ವಿಸ್ತಾರವಾಗಿ ಬೆಳೆಯಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಮಾಸ್ತಿ ರಾಜ್ಯದ ಆಸ್ತಿ. ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಒಳ್ಳೆಯ ಆಡಳಿತಗಾರರಾಗಿ ಸರ್ಕಾರಿ ಸೇವೆ ಸಲ್ಲಿಸಿದರು. ಕರ್ನಾಟಕ ಹೆಸರು ನಾಮಕರಣಕ್ಕೆ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಲ್ಲಿ ಆಗ್ರಹಿಸಿದವರಲ್ಲಿ ಪ್ರಮುಖರು. ಮಾಸ್ತಿ ಅವರ ಕತೆಗಳಲ್ಲಿ ಜೀವನ ಪ್ರೀತಿ ಮತ್ತು ಕಾರುಣ್ಯದ ಧ್ವನಿ ಕುಡಿಯೊಡೆಯುತ್ತದೆ. ಅವರ ಸಾಹಿತ್ಯವನ್ನು ಪುನರಾವಲೋಕನ ಮಾಡಬೇಕು ಎಂದರು.
ಮೇಲುಕೋಟೆ ವೆಂಗೀಪುರ ನಂಬಿಮಠದ ಇಳೈ ಆಳ್ವಾರ್ ಸ್ವಾಮೀಜಿ, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನಗರ ಘಟಕದ ಅಧ್ಯಕ್ಷ ಡಾ. ಡಾ.ಜಿ.ವಿ. ರವಿಶಂಕರ್, ಚಿನ್ನ ಬೆಳ್ಳಿ ವ್ಯಾಪಾರ ಸಂಘದ ಅಧ್ಯಕ್ಷ ಸುರೇಶ್ ಗೋಲ್ಡ್, ಅಂಬಾಭವಾನಿ ಮಹಿಳಾ ಸಮಾಜದ ಅಧ್ಯಕ್ಷೆ ಸವಿತಾ ಘಾಟ್ಕೆ, ವಿಶ್ವಮಾನವ ಡಾ.ರಾಜಕುಮಾರ್ ಸೇವಾ ಸಮಿತಿ ಕಾರ್ಯದರ್ಶಿ ಸುಚಿಂದ್ರ ಹಾಗೂ ಇತರರು ಇದ್ದರು.