

ಮಾಸ್ತಿ: ಗ್ರಾಮದಲ್ಲಿ 7.50 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಸರ್ಕಾರಿ ಶಾಲಾ ಕಟ್ಟಡವನ್ನು ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರು ಜು.26 ಶನಿವಾರದಂದು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಮಾಸ್ತಿ ಗ್ರಾಮದ ಬಸ್ ನಿಲ್ದಾಣದ ಸಮೀಪ ಪಬ್ಲಿಕ್ ಶಾಲೆಯ ಆವರಣದಲ್ಲಿ ಓಸಾಟ್ ಸಂಸ್ಥೆಯ ಸಹಯೋಗದಲ್ಲಿ ನಿರ್ಮಿಸಿರುವ ನೂತನ ಸರ್ಕಾರಿ ಶಾಲೆ ಕಟ್ಟಡವನ್ನು ಪರಿಶೀಲಿಸಿ ಮಾತನಾಡಿದ ಅವರು, ಖ್ಯಾತ ಸಾಹಿತಿ ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ ಜನಿಸಿದ ಈ ಗ್ರಾಮಕ್ಕೆ ಕೆಪಿಎಸ್ ಶಾಲೆ ಮಂಜೂರು ಮಾಡಲಾಗಿತ್ತು. ಪ್ರಸ್ತುತ ಎಲ್ಕೆಜಿಯಿಂದ ಪಿಯುಸಿವರೆಗೂ ಸುಮಾರು 1,250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ಒಸಾಟ್ ಸಂಸ್ಥೆಯ ಲಿಂಡಾ ಮತ್ತು ಶ್ರೀ ಜನಾರ್ಧನ್ ಟಕ್ಕರ್ ಅವರು ಸರ್ಕಾರಿ ಶಾಲೆಗೆ ಬರುವ ಬಡವರು ಮಧ್ಯಮ ವರ್ಗದ ಮಕ್ಕಳ ಗುಣಾತ್ಮಕ ಶಿಕ್ಷಣಾಕ್ಕಾಗಿ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದಾರೆ ಎಂದರು.
ಪ್ರತಿ ತರಗತಿಯಲ್ಲಿ ಮಕ್ಕಳು ಕುಳಿತುಕೊಳ್ಳಲು ಡೆಸ್ಕ್ಗಳು ಹಾಗೂ ಕಬೋರ್ಡ್ಗಳನ್ನು ನಿರ್ಮಿಸಲಾಗಿದೆ. ಶಿಕ್ಷಕರ ಕೊಠಡಿಗೆ ಟೇಬಲ್, ಚೇರ್ಗಳನ್ನು, ವಿಜ್ಞಾನ ಪ್ರಯೋಗಾಲಯಕ್ಕೆ, ಗ್ರಂಥಾಲಯಕ್ಕೆ ಗುಣಮಟ್ಟದ ಪೀಠೋಪಕರಣಗಳನ್ನು ನೀಡಿದ್ದಾರೆ. ಮಕ್ಕಳ ಕಲಿಕೆಗೆ ಅನುಕೂಲವಾಗುವ ಚಿತ್ರಗಳನ್ನು ಗೋಡೆಗಳ ಮೇಲೆ ಬರೆಸಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸುಸಜ್ಜಿತ ಕಾಂಪೌಂಡ್ ನಿರ್ಮಿಸಿದ್ದು, ವಿದ್ಯಾರ್ಥಿಗಳ ಕ್ರೀಡೆ ಸಹಕರಿಸುವಂತಹ ಸಾಮಾಗ್ರಿಗಳನ್ನು ಒದಗಿಸಿದ್ದಾರೆ. 1 ವರ್ಷದ ಕಾಲ ಶಾಲೆಯನ್ನು ನಿರ್ವಹಣೆ ಮಾಡಲಿದ್ದಾರೆ. ಇದಲ್ಲದೆ ಮುಂದಿನ ದಿನಗಳಲ್ಲಿ ಇನ್ನು ಅಗತ್ಯವಿರುವ 6 ತರಗತಿ ಕೊಠಡಿ ನಿರ್ಮಿಸಿಕೊಡಲಿದ್ದಾರೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಅಕ್ರಂಪಾಷಾ, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ವಿಜಯ ನರಸಿಂಹ, ಗ್ರಾಪಂ ಉಪಾಧ್ಯಕ್ಷ ಚೇತನ್, ಗ್ರಾಪಂ ಸದಸ್ಯ ಜೆಸಿಬಿ ನಾಗರಾಜ್, ಮುಖಂಡ ಟೆಂಪೋ ಮುನಿಯಪ್ಪ, ಪಿಡಿಒ ನನೀನ್ ಇದ್ದರು.