

ಎಚ್.ಡಿ.ಕೋಟೆ: ತಾಲೂಕಿನ ಬಳ್ಳೆ ಆನೆ ಶಿಬಿರದಲ್ಲಿರುವ ಶ್ರೀ ಮಾಸ್ತಮ್ಮ ದೇವಿಯ ಜಾತ್ರಾ ಮಹೋತ್ಸವ ಸೋಮವಾರ ಅದ್ದೂರಿಯಾಗಿ ನಡೆಯಿತು.
ದೇಗುಲದ ಅರ್ಚಕ ಮಾದಪ್ಪ ಹಾಗೂ ಅವರ ಪುತ್ರ ಮಂಜು ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಸೋಮವಾರ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಮುಂಜಾನೆ 4 ಗಂಟೆಗೆ ಕಬಿನಿ ಹಿನ್ನೀರಿನಲ್ಲಿರುವ ಹಳೆಯ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅಲ್ಲಿಂದ ಮೆರವಣಿಗೆಯಲ್ಲಿ ಬಂದು ಬಳ್ಳೆಯಲ್ಲಿರುವ ಮಾಸ್ತಿಗುಡಿಯಲ್ಲಿ ಬೆಳಗ್ಗೆ 10 ಗಂಟೆಗೆ ಕಳಸ ತರಲಾಯಿತು. ಇದಾದ ಬಳಿಕ ಹೋಮ, ಹವನ ಇತ್ಯಾದಿ ಪೂಜಾ ಕೈಂಕರ್ಯ ನಡೆಸಲಾಯಿತು.
ತಾಲೂಕಿನ ಸುತ್ತಮತ್ತಲ ಕಾಡಂಚಿನ ಗ್ರಾಮಸ್ಥರು, ಗಿರಿಜನರು, ಪ್ರವಾಸಿಗರು ಸೇರಿದಂತೆ ಸಾವಿರಾರು ಭಕ್ತರು ಆಗಮಿಸಿ ಮಾಸ್ತಮ್ಮ ಹಾಗೂ ಗಣೇಶನ ದರ್ಶನ ಪಡೆದು ಪುನೀತರಾದರು. ಸರತಿ ಸಾಲಿನಲ್ಲಿ ಬಂದ ಭಕ್ತರು ದೇವರ ದರ್ಶನ ಪಡೆದು ದೇಗುಲದ ಹಿಂಭಾಗ ಹಿಂದೆ ಮಾಸ್ತಮ್ಮ ದೇವಿ ಉದ್ಭವವಾಗಿದ್ದ ಅರಳಿಮರಕ್ಕೆ ಪೂಜೆ ಸಲ್ಲಿಸಿ ಕೃತಾರ್ಥರಾದರು. ಇನ್ನು ದೇವಸ್ಥಾನಕ್ಕೆ ಬಂದಿದ್ದ ಭಕ್ತರಿಗೆ ಅರಣ್ಯ ಇಲಾಖೆ ವತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು.
ಮಹಿಳೆಯರು, ಮಕ್ಕಳು. ಯುವಕ, ಯುವತಿಯರು, ನವ ದಂಪತಿಗಳು ಆಗಮಿಸಿ ದೇವರ ದರ್ಶನ ಪಡೆದರು. ಇನ್ನು ಜಾತ್ರೆ ಅಂಗವಾಗಿ ಜನಜಂಗುಳಿ ನಿಯಂತ್ರಣಕ್ಕಾಗಿ ಗೆಂಡತ್ತೂರು ಚೆಕ್‌ಪೋಸ್ಟ್ ಬಳಿ ಆಟಿಕೆ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು. ಇನ್ನು ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅರ್ಚಕ ಮಾದಪ್ಪ ಮಾತನಾಡಿ, ಈ ಶಕ್ತಿ ದೇವತೆಯನ್ನು ನಂಬಿ ವರನಟ ಡಾ.ರಾಜಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವಾರು ನಟ, ನಟಿಯರು ಗಂಧದಗುಡಿ ಚಿತ್ರೀಕರಣ ಹಾಗೂ ಇನ್ನೂ ಹಲವಾರು ಚಿತ್ರಗಳ ಚಿತ್ರೀಕರಣಕ್ಕೆ ಆಗಮಿಸಿದ ವೇಳೆ ತಾಯಿ ಮಾಸ್ತಮ್ಮನ ದರ್ಶನ ಪಡೆದು, ನಂತರ ಚಿತ್ರಿಕರಣ ಆರಂಭಿಸುತ್ತಿದ್ದರು ಎಂದರು.