

ಆನೇಕಲ್: ಕಲಾ ವಿಭಾಗದಲ್ಲಿ ಸ್ನಾತ್ತಕೋತರ ಪದವಿ ಪಡೆದ ತಾಲೂಕಿನ ಹಳೇಹಳ್ಳಿ ಗ್ರಾಮದ ಮಹೇಶ್ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡು ಅಂದಾಜು 7 ಎಕರೆಯಲ್ಲಿ ವ್ಯವಸಾಯ ಮಾಡಿ ಯಶಸ್ವಿಯಾಗಿದ್ದಾರೆ. 3 ವರ್ಷಗಳ ಹಿಂದೆ ವರ್ಷಕ್ಕೆ 3 ಲಕ್ಷ ರೂಪಾಯಿ ಆದಾಯ ಪಡೆದಿದ್ದ ಇವರು ವರ್ಷದ ಹಿಂದೆ 10 ಲಕ್ಷ ರೂ.ಆದಾಯ ಗಳಿಸಿದ್ದಾರೆ.
2017ರಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಹೇಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಬೇರೊಬ್ಬರ ಕೈಕೆಳಗೆ ಕೆಲಸ ಮಾಡಲು ಇಷ್ಟವಾಗದೆ ತಮ್ಮ 5 ಎಕರೆ ಜಮೀನಿನಲ್ಲಿ ಕೃಷಿ ಮಾಡಲು ನಿರ್ಧರಿಸಿದರು. ಇವರ ಕೃಷಿಗೆ ತಂದೆ ಅಳ್ಳೇಳಪ್ಪ ಹಾಗೂ ತಾಯಿ ಸಾಕಮ್ಮ ಕೈಜೋಡಿದರು. ಇದರ ಲವಾಗಿ 5 ಎಕರೆ ಜಮೀನು ಸೇರಿದಂತೆ ಪಕ್ಕದ 2 ಎಕರೆ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದಾರೆ.
ತೆಂಗು, ಪರಂಗಿ, ಬೀನ್ಸ್, ಕುಂಬಳಕಾಯಿ, ಸೋರೆಕಾಯಿ, ಬೆಂಡೆಕಾಯಿ, ಬದನೆಕಾಯಿ, ನುಗ್ಗೆ, ತೊಗರಿ, ಅವರೆಕಾಯಿ, ಶೇಂಗಾ, ಅಲಸಂದೆ, ಟೊಮ್ಯಾಟೊ, ಮೆಣಸಿನಕಾಯಿ, ಕೋಲು, ಮೂಲಂಗಿ, ಚಿಕಡಿಕಾಯಿ, ಜತೆಗೆ ವಾಣಿಜ್ಯ ಬೆಳೆಯಾಗಿ ಗುಲಾಬಿ ಹಾಗೂ 20 ಬಗೆಯ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ.
ಕೃಷಿ ಹೊಂಡ ನಿರ್ಮಾಣ: ಕೊಳವೆ ಬಾವಿ ಅವಲಂಬಿಸದೆ ಕೃಷಿ ಹೊಂಡ ನಿರ್ಮಿಸಿ ಸಂಗ್ರಹಿಸಿದ ನೀರನ್ನು ಬೇಸಿಗೆಯಲ್ಲಿ ಕೃಷಿಗೆ ಬಳಸಿಕೊಳ್ಳುತ್ತಿದ್ದಾರೆ.
ನರೇಗಾ ಯೋಜನೆ ಅಡಿ ಮಳೆ ನೀರು ಇಂಗಿಸಲು ಗುಂಡಿ ಕೂಡ ನಿರ್ಮಿಸಿದ್ದಾರೆ. ಇಂಗು ಗುಂಡಿ ನಿರ್ಮಾಣದ ನಂತರ ಕೊಳವೆ ಬಾವಿಯಲ್ಲಿ ಅಂತರ್ಜಲ ಹೆಚ್ಚಿದೆ. ಜಮೀನಿನ ಸುತ್ತ ಬದು ನಿರ್ಮಾಣ ಮಾಡಿ ಅಲ್ಲಿ ಪರಂಗಿ, ಚಿಕ್ಕಡಿಕಾಯಿ, ನುಗ್ಗೆ, ಬದನೆ, ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಇದರಿಂದ ಮಣ್ಣಿನ ಸವಕಳಿ ತಪ್ಪುತ್ತಿದೆ.
ಮಹೇಶ್ ಅವರ ಕೃಷಿ ಸಾಧನೆ ಗುರುತಿಸಿ 2020 ನೇ ಸಾಲಿನ ಬೆಂಗಳೂರು ಕೃಷಿ ವಿವಿಯ ಕೃಷಿ ಮೇಳದಲ್ಲಿ ಪ್ರಗತಿಪರ ರೈತ ಪ್ರಶಸ್ತಿ ದೊರೆತಿದೆ.
ಕೃಷಿ ಹೊಂಡದಲ್ಲಿ ಮೀನು ಮರಿ: ಕೃಷಿ ಹೊಂಡವನ್ನು ಮೀನು ಸಾಕಲು ಮಹೇಶ್ ಬಳಸಿಕೊಳ್ಳುತ್ತಿದ್ದಾರೆ. ಅಂದಾಜು 5 ಸಾವಿರ ಮೀನು ಮರಿಗಳನ್ನು ಹೊಂಡದಲ್ಲಿ ಸಾಕಿದ್ದಾರೆ. ತೋಟದಲ್ಲಿ ಬೆಳೆಯುವ ತರಕಾರಿಯನ್ನು ಮೀನುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ಇದರಿಂದಲೂ ಅವರು ಆದಾಯಗಳಿಸುತ್ತಿದ್ದಾರೆ.
ಎರೆಹುಳು ತೊಟ್ಟಿ: ಕೃಷಿಗೆ ಅಗತ್ಯವಾದ ಗೊಬ್ಬರಕ್ಕಾಗಿ ಅವರು ಜಮೀನಿನಲ್ಲಿ ಎರೆಹುಳು ಗೊಬ್ಬರ ತೊಟ್ಟಿ ನಿರ್ಮಿಸಿಕೊಂಡಿದ್ದಾರೆ. ತೋಟದಲ್ಲಿ ದೊರೆಯುವ ತ್ಯಾಜ್ಯದಿಂದ ಅವರು ಎರೆಗೊಬ್ಬರ ತಯಾರಿಸಿಕೊಳ್ಳುತ್ತಿದ್ದಾರೆ. ಇಡೀ ಜಮೀನಿಗೆ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಗೊಬ್ಬರ ಬಳಕೆ ಮಾಡುತ್ತಿದ್ದಾರೆ.
ಮಹೇಶ್ ಅವರ ಜತೆ ಸೇರಿ ಎರೆ, ಕೊಟ್ಟಿಗೆ ಗೊಬ್ಬರ, ಜೀವಾಮೃತ, ಪಂಚಗವ್ಯ, ಬೇವಿನ ಹಿಂಡಿ, ಹೊಂಗೆ ಹಿಂಡಿ, ಬೇವಿನ ಎಣ್ಣೆ, ಹೊಂಗೆ ಎಣ್ಣೆ, ಬಳಸಿ ಸಾವಯುವ ಕೃಷಿ ಮಾಡುತ್ತಿದ್ದೇವೆ. ಮುರುಗೇಶ್, ಸಾವಯವ ಕಷಿಕ ಬಿಡುವಿನ ಸಮಯದಲ್ಲಿ ಸಹೋದರನ ಕೃಷಿ ಕೆಲಸಕ್ಕೆ ಸಹಾಯ ಮಾಡುತ್ತಿದ್ದೇನೆ. ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ಕೊಂಡೊಯ್ಯದೇ ಸಾವಯವ ತರಕಾರಿ ಮತ್ತು ಹಣ್ಣು ಬೆಳೆಗಾರರ ಸಂಘದ ಮೂಲಕ ಮಾರಾಟ ಮಾಡುತ್ತಿದ್ದೇವೆ. ಮುನೇಶ್, ಕೃಷಿಕ ಮಹೇಶ್ ಸಹೋದರ