

ಮಂಡ್ಯ: ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸೆ.22ರಿಂದ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಇದರಿಂದ ಸಾರ್ವಜನಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಮಟ್ಟವನ್ನು ತಿಳಿಯಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಆಯೋಗ, ಜಿಲ್ಲಾಡಳಿತ ಮತ್ತು ಜಿಪಂ ವತಿಯಿಂದ ಆಯೋಜಿಸಲಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಜಿಲ್ಲಾ ಹಂತದ ಮಾಸ್ಟರ್ ಟ್ರೈನರ್ಸ್‌ಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಸಮೀಕ್ಷೆಯನ್ನು ಯಾವುದೇ ಜಾತಿ, ಧರ್ಮ ಹಾಗೂ ಮತವನ್ನು ತಿಳಿದುಕೊಳ್ಳಲು ನಡೆಸುತ್ತಿಲ್ಲ. ಪ್ರತಿ ನಾಗರಿಕರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಮಟ್ಟದ ದತ್ತಾಂಶವನ್ನು ಸಂಗ್ರಹಿಸಲು ಸಮೀಕ್ಷೆ ನಡೆಸಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದರು.
ಸಮೀಕ್ಷೆ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ಕಾರ್ಯಾಗಾರ ಹಮ್ಮಿಕೊಂಡಿದ್ದು, ಜಿಲ್ಲಾಮಟ್ಟದ ಮಾಸ್ಟರ್ ಟ್ರೈನರ್ಸ್ ಇದರ ಸದುಪಯೋಗ ಪಡೆದುಕೊಂಡು ಸಮೀಕ್ಷೆಯನ್ನು ಯಶಸ್ವಿಗೊಳಿಸಿ. ಸಮೀಕ್ಷೆಯನ್ನು ಮೊಬೈಲ್ ಅಪ್ಲಿಕೇಷನ್ ಮೂಲಕ ಕೈಗೊಳ್ಳುವುದರಿಂದ ಯಾವುದೇ ಸಮಸ್ಯೆ ಉಂಟಾಗದಂತೆ ಗಣತಿದಾರರು ನೋಡಿಕೊಳ್ಳಬೇಕು. ಯಾವ ರೀತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಾರೋ ಅದೇ ರೀತಿಯಲ್ಲಿ ಅಚ್ಚುಕಟ್ಟಾಗಿ ಸಮೀಕ್ಷೆದಾರರಿಗೆ ತರಬೇತಿ ನೀಡಿ ಎಂದು ಸಲಹೆ ನೀಡಿದರು.
ಸಮೀಕ್ಷೆಗೂ ಮುನ್ನ ಸಮೀಕ್ಷೆದಾರರು ಹಾಗೂ ಸಾರ್ವಜನಿರಿಗೆ ಅನುಕೂಲವಾಗಲು ಪ್ರಶ್ನಾವಳಿಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಈಗಾಗಲೇ ಮನೆಗೆ ಭೇಟಿ ನೀಡಿ ತಲುಪಿಸಲಾಗುತ್ತಿದೆ. ಸಮೀಕ್ಷೆದಾರರು ಕೌಶಲಯುತವಾಗಿ ವಿಶ್ವಾಸದಿಂದ ಸಾರ್ವಜನಿಕರಲ್ಲಿ ಮಾಹಿತಿ ಪಡೆಯಿರಿ ಎಂದು ತಿಳಿ ಹೇಳಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ರಾಜ್ಯಮಟ್ಟದ ಮಾಸ್ಟರ್ ಟ್ರೈನರ್ಸ್‌ನಿಂದ ತರಬೇತಿ ಪಡೆದ ಜಿಲ್ಲಾಹಂತದ ಮಾಸ್ಟರ್ ಟ್ರೈನರ್ಸ್ ಗಣತಿದಾರರಿಗೆ ತರಬೇತಿ ನೀಡುತ್ತಾರೆ. ಹಂತ ಹಂತವಾಗಿ ತರಬೇತಿ ನೀಡುವುದರಿಂದ ಮಾಹಿತಿ ರವಾನೆಯಲ್ಲಿ ಗೊಂದಲ ಉಂಟಾಗುವ ಸಾಧ್ಯತೆಯಿರುತ್ತದೆ. ಗಣತಿದಾರರು ಪ್ರತಿ ಹಂತದ ತರಬೇತಿಯಲ್ಲಿ ಯಾವುದೇ ಅನುಮಾನ, ಗೊಂದಲವಿದ್ದರೆ ಅದನ್ನು ಕೇಳಿ ತಿಳಿದುಕೊಂಡು ಪರಿಣಾಮಕಾರಿಯಾಗಿ ಸಮೀಕ್ಷೆ ನಡೆಸಿ ಎಂದು ತಿಳಿಸಿದರು.
ಸಮೀಕ್ಷೆ ನಡೆಯುವ ಸಂದರ್ಭದಲ್ಲಿ ಪ್ರತಿ ತಾಲೂಕಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಸಮೀಕ್ಷೆಯ ಕಾರ್ಯ ಶೇ.100ರಷ್ಟು ಯಶಸ್ವಿಯಾಗುವಂತೆ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ. ಯಾವುದೇ ಕಾರಣಕ್ಕೂ ಅಪ್ರಾಪ್ತರಿಂದ ಮಾಹಿತಿ ಸಂಗ್ರಹಣೆ ಮಾಡುವಂತಿಲ್ಲ ಎಂದು ಎಚ್ಚರಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳಾ, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್, ತಹಸೀಲ್ದಾರ್ ವಿಶ್ವನಾಥ್, ಮುಡಾ ಆಯುಕ್ತ ಕೃಷ್ಣಕುಮಾರ್ ಹಾಜರಿದ್ದರು.
ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಟ್ರಾನ್ಸ್ ಜೆಂಡರ್ ಸಮಸ್ಯೆಗಳನ್ನ ಆಲಿಸಲು ಮತ್ತು ಪರಿಹರಿಸಲು ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಸಮೀಕ್ಷೆಯ ಫೋಸ್ಟರ್ ಬಿಡುಗಡೆ ಮಾಡಲಾಯಿತು.