

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತರ ಅನುಕೂಲಕ್ಕೆ ಸರ್ವ ರೀತಿಯ ಅಭಿವೃದ್ಧಿ ಕಾರ್ಯ ನಡೆಸಲಾಗುವುದು. ಮಾಸ್ಟರ್ಪ್ಲ್ಯಾನ್ ಮೂಲಕ ಮೂಲಸೌಕರ್ಯ ಒದಸಲಾಗುವುದು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಾಧಿಕಾರ ಆಗಬೇಕೆಂಬ ಬೇಡಿಕೆ ಇದೆ. ಈಗ ವ್ಯವಸ್ಥಾಪನಾ ಸಮಿತಿ ಇರುವುದರಿಂದ ಮೂರು ವರ್ಷದವರೆಗೆ ಪ್ರಾಧಿಕಾರ ರಚನೆ ಮಾಡುವುದಿಲ್ಲ. ಮೂರು ವರ್ಷದ ಬಳಿಕ ಈ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಧಾರ್ಮಿಕ ದತ್ತಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಸಿ’ ಗ್ರೇಡ್ ದೇಗುಲಗಳ ಅಭಿವೃದ್ಧಿ
ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ‘ಸಿ’ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿ ನಡೆಸಲು ಆದ್ಯತೆ ನೀಡಲಾಗುವುದು. ‘ಎ’ ಮತ್ತು ‘ಬಿ’ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ಆಯಾ ದೇವಸ್ಥಾನಗಳಲ್ಲಿ ಅನುದಾನ ಲಭ್ಯವಿರುತ್ತದೆ. ಆದರೆ ‘ಸಿ’ ಗ್ರೇಡ್ ದೇವಸ್ಥಾನಗಳಲ್ಲಿ ಅನುದಾನ ಇಲ್ಲದೇ ಇರುವುದರಿಂದ ಆ ದೇವಸ್ಥಾನಗಳ ಅಭಿವೃದ್ಧಿಯನ್ನು ಶ್ರೀಮಂತ ದೇವಸ್ಥಾನಗಳ ವತಿಯಿಂದ ನಡೆಸಲು ಆದ್ಯತೆ ನೀಡಲಾಗುವುದು. ಕೇಂದ್ರದ ಪ್ರಸಾದ ಯೋಜನೆಗೆ ರಾಜ್ಯದ 54 ದೇವಸ್ಥಾನಗಳ ಪಟ್ಟಿ ಕಳುಹಿಸಲಾಗಿದೆ. ಪ್ರಸಾದ ಯೋಜನೆ ದೇಶಾದ್ಯಂತ ನಡೆಲಾಗುತ್ತಿದ್ದು, ಇದರಲ್ಲಿ ರಾಜ್ಯದ 4 ದೇವಸ್ಥಾನಕ್ಕೆ ಅನುದಾನ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
24 ಗಂಟೆ ಆರೋಗ್ಯ ಸೇವೆ
ಕುಕ್ಕೆಯಲ್ಲಿ ಸುಸಜ್ಜಿತ ಆಸ್ಪತ್ರೆ ಬೇಡಿಕೆ ಇದೆ. ತಕ್ಷಣಕ್ಕೆ ನಮಗೆ ದೇವಸ್ಥಾನದ ಆಸುಪಾಸಿನಲ್ಲಿ ಜಾಗ ಕೊಟ್ಟಲ್ಲಿ 24 ಗಂಟೆ ಆರೋಗ್ಯ ಸೇವೆ ನೀಡುವ ಕೇಂದ್ರ ಮಾಡುತ್ತೇವೆ. ಈ ಬಗ್ಗೆ ಆರೋಗ್ಯ ಸಚಿವರಲ್ಲಿ ಮಾತನಾಡುತ್ತೇನೆ. ಸುಬ್ರಹ್ಮಣ್ಯ ಆಸ್ಪತ್ರೆಗೆ ವೈದ್ಯರ, ಸಿಬ್ಬಂದಿ ನೇಮಕದ ಬಗ್ಗೆಯೂ ಮಾತನಾಡುತ್ತೇನೆ ಎಂದು ಸಚಿವ ರೆಡ್ಡಿ ಭರವಸೆ ನೀಡಿದರು.
ಶಾಸಕಿ ಭಾಗೀರಥಿ ಮುರುಳ್ಯ, ರಾಜ್ಯ ಮುಜರಾಯಿ ಆಯುಕ್ತ ಡಾ.ಎಂ.ವಿ.ವೆಂಕಟೇಶ್, ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರವಿಶಂಕರ ಶೆಟ್ಟಿ, ಮಲ್ಲಿಕಾ ಪಕ್ಕಳ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಸ್ಟರ್ ಪ್ಲ್ಯಾನ್ ಸಮಿತಿ ಸದಸ್ಯರು ಇದ್ದರು.
ಬಸ್ ಸಮಸ್ಯೆ ಪರಿಹಾರಕ್ಕೆ ಕ್ರಮ
ಈ ಹಿಂದೆ 4 ವಷರ್ ಬಿಎಂಟಿಸಿಗೆ ಮಾಮಾತ್ರ ಬಸ್ ಖರೀದಿಸಲಾಗಿತ್ತು. ಈ ವರ್ಷ 800 ಬಸ್ ಕೆಎಸ್ಸಾರ್ಟಿಸಿಗೆ ಬರಲಿದೆ. ಇದರಲ್ಲಿ ದಕ್ಷಿಣ ಕನ್ನಡಕ್ಕೆ ಆದ್ಯತೆ ನೀಡಲಾಗುವುದು. ಪುತ್ತೂರಿಗೆ 340, ಮಂಗಳೂರಿಗೆ 200 ಚಾಲಕರನ್ನು ನೇಮಕ ಮಾಡಲಾಗಿದೆ. ಒಂದೆರಡು ತಿಂಗಳಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ಕುಕ್ಕೆಗೆ ನೇರವಾಗಿ 3 ಬಸ್ ಸೌಲಭ್ಯ ಕಲ್ಪಿಸಲಾಗುವುದು. ಶಾಲಾ-ಕಾಲೇಜು ಮಕ್ಕಳಿಗೆ ಬಸ್ ನಿಲ್ಲಿಸದಿದ್ದರೆ ಅಥವಾ ಬಸ್ಗೆ ಹತ್ತಿಸಿಕೊಳ್ಳದಿದ್ದರೆ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಕಡಬ ಬಸ್ ನಿಲ್ದಾಣಕ್ಕೆ ಗುರುತಿಸಲಾದ ಜಾಗಕ್ಕೆ ರಸ್ತೆ ನಿರ್ಮಾಣಕ್ಕೆ ಜಾಗ ಇಲ್ಲವಾದರೆ ಜಿಲ್ಲಾಧಿಕಾರಿ ಮೂಲಕ ಸರಿಪಡಿಸಿಕೊಳ್ಳಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದರು. ಸುಬ್ರಹ್ಮಣ್ಯಕ್ಕೆ ಕೆಎಸ್ಸಾರ್ಟಿಸಿ ಡಿಪೋ ಬೇಡಿಕೆ ಇದೆ. ಅದಕ್ಕೆ ಯೇನೆಕಲ್ಲಿನಲ್ಲಿ ಜಾಗ ಗುರುತಿಸಲಾಗಿದ್ದು, ಕಂದಾಯ ಸಚಿವರ ಮೂಲಕ ಪರಿಶೀಲನೆ ನಡೆಸಲಾಗುವುದು ಎಂದರು.
ಕುಕ್ಕೆ ದೇವಳ ಮಾಸ್ಟರ್ ಪ್ಲ್ಯಾನ್ ಸಭೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ಕುಕ್ಕೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ 30ನೇ ಮಾಸ್ಟರ್ ಪ್ಲ್ಯಾನ್ ಸಮಿತಿ ಸಭೆ ನಡೆಯಿತು.
26 ಕೋಟಿ ರೂ. ವೆಚ್ಚದ ಸುತ್ತು ಪೌಳಿ ನಿರ್ಮಾಣ ಕೆಲಸ, ರಥಬೀದಿ ಬಲಭಾಗದಲ್ಲಿ 5 ಸಾವಿರ ಜನಏಕಕಾಲದಲ್ಲಿ ಕುಳಿತುಕೊಳ್ಳುವ ಭೋಜನ ಶಾಲೆ, 80ರಿಂದ 100 ಕೋಟಿ ರೂ. ವೆಚ್ಚದಲ್ಲಿ ಇಂಜಾಡಿ ಬಳಿ ಯಾತ್ರಿಕರಿಗೆ 820 ಕೊಠಡಿಗಳ ವಸತಿ ಯೋಜನೆ, ರಥಬೀದಿಯ ಇಕ್ಕೆಲದಲ್ಲಿ ಪಾರಂಪರಿಕ ಕಟ್ಟಡ ನಿರ್ಮಾಣ, ಆಧುನಿಕ ಶೌಚಗೃಹ, ಡಾರ್ಮೆಟರಿ ನಿರ್ಮಾಣ, ಈ ಹಿಂದಿನ ವಸತಿಗೃಹಗಳಿಗೆ ಕಾಯಕಲ್ಪ, ನೌಕರರಿಗೆ ನೂತನ ವಸತಿಗೃಹ ನಿರ್ಮಾಣ, ಕಸ ವಿಲೇವಾರಿ ಘಟಕ, ವ್ಯಾಪಾರ ಮಳಿಗೆ ನಿರ್ಮಾಣ, ಅರಂಪಾಡಿ-ಎಡೋಳಿ ಮೂಲಕ ಸುಬ್ರಹ್ಮಣ್ಯಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮೊದಲಾದ ವಿಷಯಗಳ ಕುರಿತು ಚರ್ಚೆ ನಡೆಯಿತು. ಲೋಕೋಪಯೋಗಿ ಅಭಿಯಂತ ಪ್ರಮೋದ್ ಕುಮಾರ್ ಸಚಿವರಿಗೆ ಮಾಹಿತಿ ನೀಡಿದರು.