ಭಾರತೀಯ ಪಾಕಪದ್ಧತಿ ವಿದ್ಯಾರ್ಥಿಗಳ ಆಯ್ಕೆಯಾಗಲಿ: ವಿಕಾಸ್​ ಖನ್ನಾ

udp-3-vikas khanna
Published on

ಉಡುಪಿ: ಹೊಟೇಲ್​ ಮ್ಯಾನೇಜ್​ಮೆಂಟ್​ ಕೋರ್ಸ್​ಗಳ ವಿದ್ಯಾರ್ಥಿಗಳು ಭಾರತೀಯ ಪಾಕಪದ್ಧತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕೇ ಹೊರತು ವಿಶ್ವ ಪಾಕಪದ್ಧತಿಗಳಲ್ಲ. ವಿಶ್ವದ ಯಾವುದೇ ದೇಶದಲ್ಲಿ ಸಿಗದಷ್ಟು ಅನನ್ಯ ಆಹಾರ ಪದಾರ್ಥಗಳ ಅದ್ಭುತ ಪರಂಪರೆಯನ್ನು ಭಾರತ ಹೊಂದಿದೆ. ವೈವಿಧ್ಯಮಯ ಸಂಸತಿ ಮತ್ತು ಸಂಪ್ರದಾಯಗಳ ನಾಡು ಭಾರತದ ಪಾಕಪದ್ಧತಿಯ ಶ್ರೀಮಂತವಾಗಿದೆ ಎಂದು ವಿಶ್ವ ಪ್ರಸಿದ್ಧ ಬಾಣಸಿಗ, ನಟ ವಿಕಾಸ್​ ಖನ್ನಾ ಹೇಳಿದರು.

ಮಣಿಪಾಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ಪಾಕಪದ್ಧತಿಯನ್ನು ಜಗತ್ತಿಗೆ ತೋರಿಸಲು ಅವುಗಳನ್ನು ಜನಪ್ರಿಯಗೊಳಿಸಬೇಕು. ಭಾರತೀಯ ಅಡುಗೆ ಪ್ರಪಂಚದಾದ್ಯಂತದ ಆಹಾರಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಸಾಮಾಜಿಕ ಮಾಧ್ಯಮಗಳು ಮತ್ತು ಮಾಧ್ಯಮಗಳು ಭಾರತೀಯ ತಿನಿಸುಗಳ ಶ್ರೀಮಂತಿಕೆಯನ್ನು ಪ್ರಚಾರ ಮಾಡಬಹುದು. ಹಲಸಿನ ಹಣ್ಣಿನ ಉಪ್ಪಿನಕಾಯಿ ಮತ್ತು ಮಂಗಳೂರು ಬನ್​ನೊಂದಿಗೆ ತುಪ್ಪದಲ್ಲಿ ಹುರಿದ ಬಾಳೆಹಣ್ಣು ಅತ್ಯುತ್ತಮವಾದ ಸವಿ ಹೊಂದಿದೆ. ಸೌಮ್ಯವಾದ ಸುಗಂಧ ಸುವಾಸನೆಗಾಗಿ ಭಾರತೀಯ ಆಹಾರದಿಂದ ಪ್ರೇರಿತವಾದ ಭೂತಾನ್​ ಆಹಾರವನ್ನು ನಾನು ಹೆಚ್ಚು ಇಷ್ಟ ಪಡುತ್ತೇನೆ ಎಂದು ಅವರು ಹೇಳಿದರು.

ಶ್ರೀಕೃಷ್ಣ ಮಠ ಮೆಚ್ಚಿನ ತಾಣ
ಶ್ರೀ ಕೃಷ್ಣ ಮಠದೊಂದಿಗಿನ ಭಾವನಾತ್ಮಕ ಬಂಧ ಹೊಂದಿದ್ದೇನೆ. ವಿದ್ಯಾರ್ಥಿ ಜೀವನದಿಂದಲೂ ಮಠಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದೆ. ಇಲ್ಲಿನ ಪ್ರಸಾದ, ಭೋಜನ ವೃತ್ತಿ ಜೀವನದಲ್ಲಿ ಪ್ರೇರಣೆ ನೀಡಿದೆ. ಮಠವು ಆಧುನಿಕತೆಯ ಅಬ್ಬರಕ್ಕೆ ಸಿಲುಕತೆ ಅದೇ ಹಳೆಯ ಸಾಂಪ್ರದಾಯಿಕ ರಚನೆಯಾಗಿ ಉಳಿದಿರುವುದು ಮನಸ್ಸಿಗೆ ಮುದ ನೀಡುತ್ತದೆ ಎಂದರು.

ಈ ಸಂದರ್ಭದಲ್ಲಿ ವೆಲ್​ಕಾಮ್​ಗ್ರೂಪ್​ ಗ್ರಾಜುಯೇಟ್​ ಸ್ಕೂಲ್​ ಆಫ್​ ಹೋಟೆಲ್​ ಅಡ್ಮಿನಿಸ್ಟ್ರೆಷನ್​ ಪ್ರಾಂಶುಪಾಲ ತಿರುಜ್ಞಾನಸಂಬಂಧಂ, ಮಾಹೆ ಸಂಸ್ಥೆಯ ವಸಂತಿ ಅರ್​.ಪೈ, ಮಾಹೆ ರಿಜಿಸ್ಟ್ರಾರ್​ ನಾರಾಯಣ ಸಭಾಹಿತ್​, ಕುಲಸಚಿವ ಡಾ. ಗಿರಿಧರ್​ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net