

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಧರ್ಮ ಪ್ರಭಾವದೊಂದಿಗೆ ಜೈನರ ಆಚಾರ ವಿಚಾರಗಳು, ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಅರಿವು, ಜಾಗೃತಿ ಮೂಡಿಸುವುದೇ ಭಗವಾನ್ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕದ ಉದ್ದೇಶ ಎಂದು ಜೈನಕಾಶಿ ಮೂಡುಬಿದಿರೆಯ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ವೇಣೂರು ಬಾಹುಬಲಿ ಸಭಾಭವನದಲ್ಲಿ 2024ರ ಫೆ.22ರಿಂದ ಮಾ.1ರವರೆಗೆ ನಡೆದ ಭಗವಾನ್ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕದ ಸ್ಮರಣಾರ್ಥ ಪ್ರಕಟಿಸಿದ ಸಿರಿ ಬಾಹುಬಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎ.ಜಯಕುಮಾರ ಶೆಟ್ಟಿ, ಹಾ.ಮಾ.ನಾ.ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ ಡಾ.ಎಸ್.ಡಿ.ಶೆಟ್ಟಿ ಮತ್ತು ಮುನಿರಾಜ ರೆಂಜಾಳ ಸ್ಮರಣ ಸಂಚಿಕೆಯ ಸಂಪಾದಕರಾಗಿದ್ದಾರೆ. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿದರು. ಅಳದಂಗಡಿ ಅರಮನೆಯ ತಿಮ್ಮಣರಸರಾದ ಡಾ.ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಪಿ.ಜಯರಾಜ ಕಂಬಳಿ, ಡಾ.ಎ.ಜಯಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಮಸ್ತಕಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ವಿ.ಪ್ರವೀಣ್‌ಕುಮಾರ್ ಇಂದ್ರ ಸ್ವಾಗತಿಸಿದರು. ಮಹಾವೀರ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸನ್ಮಾನ
ಮಸ್ತಕಾಭಿಷೇಕ ಮಹೋತ್ಸವಕ್ಕೆ ಸಹಕಾರ ಮತ್ತು ನೆರವು ನೀಡಿದ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಎಂಆರ್‌ಪಿಎಲ್‌ನ ಎಂಜಿನಿಯರ್ ಸ್ವಾಮಿಪ್ರಸಾದ್, ಸ್ಮರಣಸಂಚಿಕೆ ಸಂಪಾದಕ ಡಾ.ಎ.ಜಯಕುಮಾರ ಶೆಟ್ಟಿ, ಅಟ್ಟಳಿಗೆ ನಿರ್ಮಾಣ ಮಾಡಿದ ಮಾಣಿಯ ಪದ್ಮಪ್ರಸಾದ್ ಮತ್ತು ಮಹಾವೀರ ಪ್ರಸಾದ್ ಅವರನ್ನು ಗೌರವಿಸಲಾಯಿತು.
ಮನ-ವಚನ-ಕಾಯದಿಂದ ಅಹಿಂಸೆಯ ಪರಿಪಾಲನೆ ಹಾಗೂ ಬದುಕು ಮತ್ತು ಬದುಕಲು ಬಿಡು ಎಂಬುದು ಜೈನಧರ್ಮದ ಸಾರವಾಗಿದೆ. ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂದು ಭಗವಾನ್ ಬಾಹುಬಲಿ ಸಾಧಿಸಿ ತೋರಿಸಿದ್ದಾರೆ. ವಿವಿಧ ಸಮಿತಿಗಳ ಸಕ್ರಿಯ ಸಹಕಾರ, ಸರ್ಕಾರದ ನೆರವು ಹಾಗೂ ದಾನಿಗಳ ಉದಾರ ಕೊಡುಗೆಯಿಂದ ಮಸ್ತಕಾಭಿಷೇಕ ಯಶಸ್ವಿಯಾಗಿದೆ. ಚಾರುಕೀರ್ತಿಭಟ್ಟಾರಕ ಸ್ವಾಮೀಜಿ, ಮೂಡಬಿದಿರೆ ಜೈನಮಠ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ನೇತೃತ್ವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸಕಾಲಿಕ ಸಹಕಾರದಿಂದ ಮಸ್ತಕಾಭಿಷೇಕ ಯಶಸ್ವಿಯಾಗಿ ನಡೆದಿದೆ. ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ. https://www.vijayavani.net/theft-of-gold-jewellery-3 https://www.vijayavani.net/attack-5