ಕಾರ್ಮಿಕರ ಬೃಹತ್ ಪ್ರತಿಭಟನಾ ಮೆರವಣಿಗೆ

h9-CITU 2
Published on

ಹುಬ್ಬಳ್ಳಿ: ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ದೇಶವ್ಯಾಪಿ ಕರೆ ನೀಡಿದ್ದ ಮುಷ್ಕರಕ್ಕೆ ಬೆಂಬಲಿಸಿದ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸಂಯುಕ್ತ ಕಿಸಾನ್ ಮೋರ್ಚಾ ಪದಾಧಿಕಾರಿಗಳು, ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಮಳೆಯಲ್ಲಿಯೇ ಸಾವಿರಾರು ಕಾರ್ಮಿಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂಬೇಡ್ಕರ್ ವೃತ್ತದಲ್ಲಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ,

ದೇಶದ ಕಾರ್ಮಿಕ ವರ್ಗದ ತೀವ್ರ ವಿರೋಧ ಲೆಕ್ಕಿಸದೆ 2020ರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಹಾಗೂ 2019ರ ಸಂಸತ್ತಿನ ಅಧಿವೇಶನದಲ್ಲಿ ದೇಶದಲ್ಲಿ ಜಾರಿಯಲ್ಲಿದ್ದ 29 ಕಾರ್ಮಿಕ ಕಾನೂನುಗಳ ಬದಲಾಗಿ ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ, ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಪರಿಸ್ಥಿಗಳ ಸಂಹಿತೆ ಹಾಗೂ ವೇತನ ಸಂಹಿತೆಗಳನ್ನಾಗಿ ಅಂಗೀಕರಿಸಲಾಗಿದೆ.

ಈ ನಾಲ್ಕು ಕಾರ್ಮಿಕ ಸಂಹಿತೆಗಳು ದೇಶದ ಕಾರ್ಮಿಕರ ರಕ್ಷಣಾತ್ಮಕ ಅಂಶ, ಜೀವಿಸುವ ಹಕ್ಕು, ಮೂಲಭೂತ ಹಕ್ಕು, ವೇತನ ಕುರಿತ ವ್ಯಾಖ್ಯಾನ, ಮುಷ್ಕರ/ಹೋರಾಟದ ಹಕ್ಕು, ಸಾಮಾಜಿಕ ಭದ್ರತೆ, ಮಾಲೀಕ-ಕಾರ್ಮಿಕ ಸಂಬಂಧ, ವೇತನ ಚೌಕಾಸಿ, ಆರೋಗ್ಯ ಮತ್ತು ಸುರಕ್ಷತೆ ನಿಯಮಗಳನ್ನು ಮೊಟಕುಗೊಳಿಸಲಿವೆ ಹಾಗೂ ಕಲ್ಯಾಣ ರಾಜ್ಯದ ಪರಿಕಲ್ಪನೆಗಳನ್ನು ದುರ್ಬಲಗೊಳಿಸಲಿವೆ. ಕೂಡಲೇ ಲೇಬರ್ ಕೋಡ್ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಗಂಗಾಧರ ಬಡಿಗೇರ, ಆರ್.ಎಫ್. ಕವಳಿಕಾಯಿ, ಸ್ಟಿಫನ್ ಜಯಚಂದ್ರ, ಮಮದಾಪೂರ, ಗುರುಸಿದ್ದಪ್ಪ ಅಂಬಿಗೇರ, ಚನ್ನಮ್ಮ ಡೊಳ್ಳಿ, ಬಸವಣ್ಣೆಪ್ಪ ನೀರಲಗಿ, ಸುನಂದಾ ಚಿಗರಿ, ರಮೇಶ ಭೂಸ್ಲೆ, ರಮೇಶ ಹಿರೇಗೌಡರ, ಆನಂದ ಬಡಿಗೇರ, ಜಿ.ಎಂ. ವೈದ್ಯ, ಶರಣು ಗೋನವಾರ, ಮಂಜುನಾಥ ದೊಡ್ಡಮನಿ, ಬಷೀರ ಮುಧೋಳ, ನಾರಾಯಣ ಆರೇರ ಇತರರು ಮಾತನಾಡಿದರು.

ಸಿಐಟಿಯು, ಎಐಟಿಯುಸಿ, ಎಐಯುಟಿಯುಸಿ, ಎಐಬಿಇಎ, ಎಐಐಇಎ, ಜಿಐಸಿ, ಬಿಎಸ್‌ಎನ್‌ಎಲ್‌ಇಯು, ಹಾಗೂ ಹಮಾಲಿ, ಬಿಸಿಯೂಟ, ಕಟ್ಟಡ, ಆಶಾ, ಗ್ರಾಮ ಪಂಚಾಯಿತಿ, ಔಷಧ ಪ್ರತಿನಿಧಿಗಳು, ರೈಲು ನಿಲ್ದಾಣ ಹಮಾಲರು, ಗ್ರಾಮೀಣ ಬ್ಯಾಕ್ ಹಾಗೂ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ನೌಕರರು, ಗುತ್ತಿಗೆ ಕಾರ್ಮಿಕರು ಕೆಲಸದಿಂದ ಹೊರಗುಳಿದು ಮುಷ್ಕರ ನಡೆಸಿದರು. ಹುಬ್ಬಳ್ಳಿ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net