

ಚಿಕ್ಕಮಗಳೂರು: ಸುಬ್ರಮಣಿಯನ್ ಸ್ವಾಮಿ ವಿರುದ್ಧ ಡಿಎಂಕೆ ಮುಖಂಡ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಖಂಡಿಸಿ ದಲಿತ ಮುಖಂಡ ಪಕ್ಷದ ರಾಜ್ಯಾಧ್ಯಕ್ಷ ಡಾ.ಎಲ್.ಮುರುಗನ್ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ನಡೆಯುತ್ತಿರುವ ವೆಟ್ರಿವೇಲ್ ಯಾತ್ರೆಗೆ ದೊಡ್ಡ ಪ್ರಮಾಣದ ಜನಬೆಂಬಲ ಸಿಕ್ಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ತಮಿಳುನಾಡಿನಲ್ಲಿ ಬಿಜೆಪಿಗೆ ವಾತಾವರಣ ಚೆನ್ನಾಗಿದೆ. ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಜನನಾಯಕರಾಗಿ ರೂಪುಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲೂ ರಾಷ್ಟ್ರವಾದಿ ಮನೋಭಾವನೆ ಬಲಗೊಳ್ಳುತ್ತದೆ. ಕೇಂದ್ರ ಗೃಹಮಂತ್ರಿ ಅಮಿತ್‍ಷಾ ಪ್ರವಾಸದ ಸಂದರ್ಭ ಯುವಕರು ಉತ್ಸಾಹದಿಂದ ದೊಡ್ಡ ಪ್ರಮಾಣದಲ್ಲಿ ಸ್ವಾಗತಿಸಿದ್ದೆ ಇದಕ್ಕೆ ನಿದರ್ಶನ ಎಂದರು.
ತಮಿಳುನಾಡು ಟ್ರೆಂಡ್ ಬದಲು
ಬೇರೆ ಬೇರೆ ಪಕ್ಷದ ಮುಖಂಡರು ಪಕ್ಷದತ್ತ ಮುಖಮಾಡಿದ್ದಾರೆ. ತಮಿಳುನಾಡು ಟ್ರೆಂಡ್ ಬದಲಾಗಿದೆ ಎಂಬುದಕ್ಕೆ ಇದೊಂದು ಮುನ್ಸೂಚನೆ. ದೇಶ ಮೊದಲು ಎನ್ನುವ ಸಿದ್ದಾಂತದ ಆಧಾರದಲ್ಲಿ ಪಕ್ಷ ಸಂಘಟಿಸುವ ಜವಾಬ್ದಾರಿ ನಮ್ಮ ಮೇಲಿದ್ದು ಅದನ್ನು ಮಾಡುತ್ತೇವೆ ಎಂದು ಹೇಳಿದರು.
ಪಕ್ಷದಲ್ಲಿ ವ್ಯಕ್ತಿ ಪೂಜೆ ಇಲ್ಲ
ವ್ಯಕ್ತಿ ಪೂಜೆ ಮಾಡುವ ಆ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಅಲ್ಲಿನವರು ಒತ್ತು ಕೊಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ ಸಾಮಾನ್ಯ ಜನ ರಾಷ್ಟ್ರೀಯ ಹಿತಾಸಕ್ತಿ ಜತೆಗಿದ್ದಾರೆ. ಮುನ್ನೆಡೆಸುವವರು ಮಾತ್ರ ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ನಮ್ಮಲ್ಲಿ ವ್ಯಕ್ತಿ ಪೂಜೆ ಇಲ್ಲ, ವಿಚಾರದ ಪೂಜೆ, ರಾಷ್ಟ್ರ ಪೂಜೆ, ಭಾರತೀಯ ಜನತಾ ಕಚ್ಚಿ ವಾಳ್ಗೆ ಅನ್ನುವುದನ್ನು ಮುಂದಿಟ್ಟುಕೊಂಡು ಪಕ್ಷ ಕಟ್ಟುತ್ತೇವೆ. ಪಂಚ ಭಾಷಾತಾರೆ ವಿಜಯಶಾಂತಿ ಬಿಜೆಪಿಗೆ ಸೇರ್ಪಡೆ ಕುರಿತಂತೆ ಮಾತನಾಡಿ ನಮಗೆ ವಿಷಯ ತಿಳಿದಿದ್ದರೂ ಅದು ಆಯಾ ರಾಜ್ಯದ ವಿದ್ಯಮಾನ ಅಲ್ಲಿನವರೆ ಪ್ರತಿಕ್ರಿಯಿಸುತ್ತಾರೆ ಎಂದರು.