2ಎ ಮೀಸಲಾತಿಗಾಗಿ ಮೋಟೆಬೆನ್ನೂರಲ್ಲಿ ಬೃಹತ್ ಹೋರಾಟ

KUDALA SANGAMA SHREE
Published on

ಸವಣೂರ: ಮುಖ್ಯಮಂತ್ರಿಗಳು ಕೇಳಿದ ಕಾಲಾವಕಾಶ ಮುಗಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ. ಆದ್ದರಿಂದ ಸಮಾಜ ಬಾಂಧವರು ಕಡ್ಡಾಯವಾಗಿ ಲಿಂಗಧಾರಣೆಯೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕೂಡಲಸಂಗಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

2ಎ ಮಿಸಲಾಯಿತಿ ಹೋರಾಟ ಹಿನ್ನೆಲೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಹಾವೇರಿ ಜಿಲ್ಲಾ ಘಟಕ, ಬ್ಯಾಡಗಿ ತಾಲೂಕು ಘಟಕದ ನೇತೃತ್ವದಲ್ಲಿ ಜ. 12ರಂದು ಮೋಟೆಬೆನ್ನೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಮಟ್ಟದ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಪಟ್ಟಣದ ಶುಕ್ರವಾರ ಪೇಟೆಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

2ಎ ಮಿಸಲಾತಿಗಾಗಿ ಕಳೆದ ಮೂರು ವರ್ಷಗಳಿಂದ ದೊಡ್ಡ ಮಟ್ಟದ ಹೋರಾಟ ಕೈಗೊಳ್ಳಲಾಗುತ್ತಿದೆ. ಹಿಂದಿನ ಸರ್ಕಾರ 2ಡಿ ಮಿಸಲಾಯಿತಿ ನೀಡಿತ್ತು. ಆದರೆ, ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಅನುಷ್ಠಾನಗೊಳ್ಳಲಿಲ್ಲ. ಸಿದ್ದರಾಮಯ್ಯ ಸರ್ಕಾರದ ಜತೆ ಎರಡು ಬಾರಿ ಮಾತುಕತೆ ಕೈಗೊಳ್ಳಲಾಯಿತು. ಕಾನೂನು ತಜ್ಞರೊಂದಿಗೆ ರ್ಚಚಿಸಲು ಪಡೆದ ಕಾಲಾವಕಾಶ ಮೀರಿದ ಹಿನ್ನೆಲೆಯಲ್ಲಿ ಹೆದ್ದಾರಿ ತಡೆದು ಇಷ್ಠಲಿಂಗಪೂಜೆಯೊಂದಿಗೆ ಹೋರಾಟ ಆರಂಭಿಸಲಾಗಿದೆ ಎಂದರು.

ಈಗಾಗಲೇ ಬಾಗಲಕೋಟೆ, ದಾವಣಗೆರೆ, ಧಾರವಾಡ, ಬೆಳಗಾವಿ, ವಿಜಯಪುರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೈಗೊಳ್ಳಲಾಗಿದೆ. ಹಾವೇರಿ ಜಿಲ್ಲೆಯ ಮೊಟೇಬೆನ್ನೂರಿನಲ್ಲಿ ಜ. 12ರಂದು ಹಮ್ಮಿಕೊಳ್ಳಲಾಗಿದೆ. ಬಸವೇಶ್ವರ ದೇವಸ್ಥಾನದಿಂದ ಪಾದಯಾತ್ರೆಯ ಮೂಲಕ ಹೊರಟು ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಸಂಪನ್ನಗೊಳಿಸಲಾಗುವುದು. ಒಂದು ತಾಸು ಸಂಚಾರ ಬಂದ್ ಮಾಡಿ ಇಷ್ಠಲಿಂಗಪೂಜೆ ಕೈಗೊಂಡು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗುತ್ತದೆ ಎಂದರು.

ಪಂಚಮಸಾಲಿ ಸಮಾಜದ ಸವಣೂರ ತಾಲೂಕು ಅಧ್ಯಕ್ಷ ಬಿ.ಎಂ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಮಸಾಲಿ, ಗೌಡ, ಮಲೆಗೌಡ, ದೀಕ್ಷೆ ಲಿಂಗಾಯತರಿಗೆ 2ಎ ಮಿಸಲಾತಿ ಅನುಷ್ಠಾನಕ್ಕೆ ಹಾಗೂ ಲಿಂಗಾಯತ ಉಪಸಮಾಜಗಳಿಗೆ ಒಬಿಸಿ ಮೀಸಲಾಯಿತಿಗಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಒತ್ತಾಯಿಸಬೇಕಿದೆ ಎಂದರು.

ಸಂಘಟನೆಯ ಪದಾಧಿಕಾರಿಗಳಾದ ಬಿ.ಎಂ. ಇಂಗಳಗಿ, ಕರಿಯಪ್ಪ ಶಿವಬಸಣ್ಣವರ, ತಿಪ್ಪಣ್ಣ ಸುಬ್ಬಣ್ಣವರ, ರವತಪ್ಪ ಬಿಕ್ಕಣ್ಣನವರ, ಗುರುಪಾದಪ್ಪ ಶಿಗ್ಗಾಂವಿ, ಗಿರೀಶ ಮಟಿಗಾರ, ಸೋಮನಗೌಡ ಅರಳಿಹಳ್ಳಿ, ಗುರುಶಾಂತಪ್ಪ ಕುರವತ್ತಿ, ಮಲ್ಲೇಶ ನೀರಲಗಿ, ಶಂಕ್ರಪ್ಪ ಕುಲಕರ್ಣಿ, ಪರ್ವತಗೌಡ ಪಾಟೀಲ, ರಾಜೇಶ್ವರಿ ಬುಶೆಟ್ಟಿ, ಪುಷ್ಪಾ ಬತ್ತಿ, ರೇಖಾ ಮುದಗಲ್, ಕವಿತಾ ಬಿಕ್ಕಣ್ಣನವರ, ಪುಷ್ಪಾ ಮುದಗಲ್, ವೀಣಾ ಮುದಗಲ್, ಸುಮಾ ಮುದಗಲ್, ಅನಸೂಯಾ ತೆಲಗಿ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net