ಪಾದಚಾರಿಗಳ ಮೇಲೆ ಟಿಪ್ಪರ್​ ಪಲ್ಟಿ; ಒಂದೇ ಕುಟುಂಬದ ಐವರು ದುರ್ಮರಣ

Tipper
Published on

ಬಾಗಲಕೋಟೆ: ಟಿಪ್ಪರ್​ ಟೈರ್​ ಸ್ಫೋಟಗೊಂಡು ಪಲ್ಟಿಯಾದ ಪರಿಣಾಮ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಪ್ರಾಣಬಿಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಹೊನ್ಯಾಳ ಕ್ರಾಸ್ ಬಳಿ‌ ನಡೆದಿದೆ.

ಮೃತರನ್ನು ಬಾದರದಿನ್ನಿ ಗ್ರಾಮದ ವೆಂಕಪ್ಪ ತೋಳಮಟ್ಟಿ (70), ಆತನ ಪತ್ನಿ ಯಲ್ಲವ್ವ ತೋಳಮಟ್ಟಿ(60), ಮಗ ಪುಂಡಲೀಕ ತೋಳಮಟ್ಟಿ(35), ಮಗಳು ನಾಗವ್ವ ಬಮ್ಮಣ್ಣವರ (40) ಹಾಗೂ ಅಳಿಯ ಅಶೋಕ ಬಮ್ಮಣ್ಣವರ(45) ಎಂದು ಗುರುತಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮೃತ ವೆಂಕಪ್ಪ ಬಾದರದಿನ್ನಿ ಗ್ರಾಮದವರಾಗಿದ್ದು, ಅಳಿಯ ಮತ್ತು ಮಗಳು ಗಿರಿಸಾಗರ ಗ್ರಾಮದವರು. ಇವರೆಲ್ಲಾ ಹೊದಲ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್​ ತೆರಳುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ದ ಗರಸು ತುಂಬಿದ್ದ ಟಿಪ್ಪರ್ ಟೈರ್​ ಸ್ಫೋಟಗೊಂಡ ಪರಿಣಾಮ ರಸ್ತೆ ಬದಿ ನಡೆದುಕೊಂಡು ಬರುತ್ತಿರುವರ ಮೇಲೆ ಲಾರಿ ಪಲ್ಟಿಯಾಗಿದ್ದು ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ, ಎಎಸ್ಪಿ ಪ್ರಸನ್ನ ದೇಸಾಯಿ ಹಾಗೂ ಬೀಳಗಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net