

ವಿಜಯವಾಣಿ ಸುದ್ದಿಜಾಲ ಉಡುಪಿ
ನಮ್ಮ ಹಿರಿಯರು ಮಾಡಿದ ಪುಣ್ಯಫಲದಿಂದ ನಮಗೆಲ್ಲರಿಗೂ ಸಮಾಜದಲ್ಲಿ ಸ್ಥಾನಮಾನ ಗೌರವ, ಕೀರ್ತಿ, ಯಶಸ್ಸು ಲಭಿಸಿದೆ. ಅದರಂತೆಯೇ ಈಗ ತಾವೆಲ್ಲ ಸೇರಿ ಮಾಡಿದ ರಾಮನಾಮ ಜಪದಿಂದ ನಿಮ್ಮ ಸಂಸಾರಕ್ಕೆ, ನಿಮ್ಮ ಕುಟುಂಬಗಳಲ್ಲಿ ಮುಂದಿನ ಸಂತಾನಗಳಿಗೂ ಶ್ರೇಷ್ಠ ಫಲ ನಿರಂತರ ಸಿಗುತ್ತದೆ ಎಂದು ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧೀಶ ಶ್ರೀಪಾದ ಒಡೆಯರ್ ಸ್ವಾಮೀಜಿ ನುಡಿದರು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷದ ಪ್ರಯುಕ್ತ ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಬೃಹತ್ ರಾಮನಾಮ ಜಪ ಅಭಿಯಾನದಲ್ಲಿ ಆಶೀರ್ವಚನ ನೀಡಿದರು.
550 ದಿನಗಳ ಕಾಲ ನಿರಂತರ ನಡೆಯಲಿರುವ ಶ್ರೀರಾಮನಾಮ ಜಪ ಅಭಿಯಾನವು ನಮ್ಮ ಸಮಾಜದವರಿಗೆ ಲಭಿಸಿದಂತಹ ಅಭೂತಪೂರ್ವ ಅವಕಾಶವಾಗಿದೆ. ರಾಮನ ಜಪ ಮಾಡಿದರೆ ಒಂದಲ್ಲ ಒಂದು ರೀತಿಯಲ್ಲಿ ದೇವರ ಅನುಗ್ರಹ ಲಭಿಸುತ್ತದೆ. ನಾವು ದೇವರ ಮೇಲೆ ದೃಢವಾದ ನಂಬಿಕೆ ಇಟ್ಟರೆ ಬದಬುಕಿನ ದುಗುಡ ನಿವಾರಣೆಯಾಗುತ್ತದೆ. ಇಂತಹ ಧಾರ್ಮಿಕ ಕಾರ್ಯದಿಂದ ಲೋಕಕಲ್ಯಾಣವಾಗುವುದು ಎಂದರು.
ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಅಭಿಯಾನದಲ್ಲಿ ಸಹಸ್ರಕ್ಕೂ ಅಧಿಕ ಭಕ್ತರು ಪಾಲ್ಗೊಂಡು 41 ಲಕ್ಷ ರಾಮನಾಮ ತಾರಕ ಮಹಾಮಂತ್ರ ಜಪಿಸಿದರು. ಶ್ರೀರಾಮನಾಮ ಅಭಿಯಾನದ ನಂತರ ಲಕ್ಷ್ಮೀ ವೆಂಕಟೇಶ ಸ್ವಾಮಿಗೆ ಶ್ರೀಗಳು ವಿಶೇಷ ರಾತ್ರಿ ಪೂಜೆ ನೆರವೇರಿಸಿದರು. ಶ್ರೀ ರಾಮನಾಮ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
ಅರ್ಚಕ ಅನಂತ ವೈದಿಕ ವೇದ ಮಂತ್ರದೊಂದಿಗೆ ಪ್ರಾರ್ಥಿಸಿದರು. ದೇವಳದ ಧರ್ಮದರ್ಶಿ ಪಿ.ವಿ. ಶೆಣೈ ಸ್ವಾಗತಿಸಿದರು. ವೇ.ಮೂ. ಚೇಂಪಿ ರಾಮಚಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಜಗದೀಶ್ ಪೈ ಸಹಕರಿಸಿದರು.