

ಮಂಡ್ಯ: ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತವಾಗಿಸಲು ವಿವಿಧ ಇಲಾಖೆ ಹಾಗೂ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ಸುಬ್ರಮಣ್ಯ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದ ಎದುರು ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ‘ಮಂಡ್ಯವನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಬೃಹತ್ ಜಾಥಾ’ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಬಾಲ್ಯ ವಿವಾಹದ ದುಷ್ಪರಿಣಾಮಗಳು, ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಮೂಲಕ ಬಾಲ್ಯ ವಿವಾಹವನ್ನು ವಿರೋಧಿಸುವ ಪ್ರೌವೃತ್ತಿ ಬೆಳಸಿಕೊಳ್ಳಬೇಕು. ಬಾಲ್ಯ ವಿವಾಹದ ಪ್ರಕರಣ ಎದುರಾದಲ್ಲಿ ಅಥವಾ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ-1098 ಅಥವಾ 112 ಗೆ ಕರೆ ಮಾಡಿದರೆ ತಕ್ಷಣ ಅಧಿಕಾರಿಗಳು ಬಾಲ್ಯ ವಿವಾಹ ನಿಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದರು.
ಅನಕ್ಷರತೆ ಹಾಗೂ ಬಡತನದಿಂದ ಈ ಹಿಂದೆ ಬಾಲ್ಯ ವಿವಾಹಗಳು ನಡೆಯುತ್ತಿತ್ತು. ಇಂದು ಎಲ್ಲರೂ ಅಕ್ಷರಸ್ಥರಾಗಿದ್ದಾರೆ. ಆದರೂ ಸಹ ಬಾಲ್ಯ ವಿವಾಹ ನಡೆಯುತ್ತದೆ ಎಂದರೆ ಇಂತಹ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಎಲ್ಲರೂ ಜಾಗೃತರಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸ್ವಾತಂತ್ರ್ಯದ ಪೂರ್ವದಲ್ಲಿ ಸಮಾಜದಲ್ಲಿ ಬಡತನ, ಅನಕ್ಷರತೆ, ಮೂಢನಂಬಿಕೆ ಹೆಚ್ಚಿದ್ದ ಕಾರಣ ಬಾಲ್ಯವಿವಾಹಗಳು ನಡೆಯುತ್ತಿತ್ತು. ಆದರೆ ಇಂದಿನ ಆಧುನಿಕ ಸಮಾಜದಲ್ಲಿ ಶಿಕ್ಷಣ, ತಂತ್ರಜ್ಞಾನ, ವೈಚಾರಿಕತೆಯಲ್ಲಿ ಮುಂದೆ ಬಂದಿದ್ದೇವೆ. ಆದರೂ ನಮ್ಮ ಸುತ್ತಮುತ್ತಲೂ ಬಾಲ್ಯ ವಿವಾಹದಂತಹ ಪ್ರಕರಣಗಳು ಕಂಡು ಬರುತ್ತಿದೆ ಎಂದರೆ ಎಲ್ಲರೂ ತಲೆ ತಗ್ಗಿಸಿ ನಿಲ್ಲಬೇಕಾಗುತ್ತದೆ. ಬಾಲ್ಯ ವಿವಾಹ ಸಮಾಜಕ್ಕೆ ಅಂಟಿಕೊಂಡಿರುವ ಕಳಂಕ. ಇದನ್ನು ತೊಡೆದು ಹಾಕಲು ಇಲಾಖೆಗಳೊಂದಿಗೆ ಸಾರ್ವಜನಿಕರು ಜತೆಗೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ನಿರಂತರವಾಗಿ ಗೈರು ಹಾಜರಾದರೆ ತಕ್ಷಣ ಶಿಕ್ಷಕರು ಎಚ್ಚತ್ತು ಕೊಂಡು ಅವರ ಪೋಷಕರನ್ನು ಸಂಪರ್ಕಿಸಿ ಕಾರಣ ತಿಳಿದುಕೊಳ್ಳಬೇಕು. ಇದರಿಂದ ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟಬಹುದು. ಗ್ರಾಮೀಣ ಭಾಗದಲ್ಲಿ ಹಲವಾರು ಇಲಾಖೆಗಳು ಕಾರ್ಯನಿರ್ವಹಿಸುತ್ತದೆ. ಅಲ್ಲಿನ ಅಧಿಕಾರಿ, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಕಣ್ಣು ತಪ್ಪಿಸಿ ಬಾಲ್ಯ ವಿವಾಹ ನಡೆಯಲು ಸಾಧ್ಯವಿಲ್ಲ. ಜಾಗೃತರಾಗಿ ಕಾರ್ಯನಿರ್ವಹಿಸಿದರೆ ಬಾಲ್ಯ ವಿವಾಹ ನಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಬಹಳ ಹಿಂದೆ ಬೀದಿ ನಾಟಕ, ಸಾಕ್ಷ್ಯಚಿತ್ರ, ಜಾನಪದ ಕಲಾಜಾಥಾಗಳ ಮೂಲಕ ಬಾಲ್ಯ ವಿವಾಹ ತಡೆಯಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಇಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಅವರ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮ ಸಭೆಗಳಲ್ಲಿ ಮಕ್ಕಳು ತಮಗೆ ಉದ್ಭವಿಸುವ ಸಂದೇಹಗಳ ಬಗ್ಗೆ ಪತ್ರ ಮುಖೇನ ಪ್ರಶ್ನೆಗಳನ್ನು ಸಲ್ಲಿಸಿದರೆ ಉತ್ತರ ನೀಡಲಾಗುತ್ತಿದೆ. ಮಕ್ಕಳ ಗ್ರಾಮ ಸಭೆಯಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿಗಳನ್ನು ವಿರೋಧಿಸಿ ಅನೇಕ ಮಹನೀಯರು ಬ್ರಿಟಿಷ್ ಆಡಳಿತ ಅವಧಿಯಲ್ಲೇ ಹೋರಾಟ ನಡೆಸಿದರು. ಬಾಲ್ಯ ವಿವಾಹ ನಿಷೇಧ ಹಾಗೂ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದು ಅನುಷ್ಠಾನ ಹಾಗೂ ಹೋರಾಟದ ನಂತರ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆಯಾಗುತ್ತಿದೆ. ಆದರೆ ಪ್ರೇಮ ಪ್ರಕರಣಗಳ ಮೂಲಕ ಬಾಲ ಗಭೀರ್ಣಿಯರ ಪ್ರಕರಣ ಹೆಚ್ಚಾಗುತ್ತಿದ್ದು, ಇದನ್ನು ಸರಿಪಡಿಸುವುದು ಹೊಸ ಸವಾಲಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟಿದ ನಂತರ ಹೆಣ್ಣು ಮಗು ಶಾಲೆಯ ಕಡೆಗೆ ಹೆಜ್ಜೆ ಹಾಕಬೇಕು. ಹೆಣ್ಣು ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ನೋಡಿಕೊಳ್ಳಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಬಕಾರಿ ಉಪ ಆಯುಕ್ತ ನಾಗಶಯನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ನಗರಸಭೆ ಪೌರಾಯುಕ್ತೆ ಪಂಪಶ್ರೀ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಲುವಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಕೋರ್ಟ್ ಆವರಣದಿಂದ ಹೊರಟ ವಾಕಥಾನ್ ಪ್ರಮುಖ ರಸ್ತೆ ಮೂಲಕ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯವಾಯಿತು.