ಕುಕ್ಕುಂದೂರಲ್ಲಿ ಬೃಹತ್ ಜನಾಗ್ರಹ ಸಭೆ

Published on

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು, ಹಲವರ ಕೈವಾಡದಿಂದ ನಿರಂತರ ಅಪಪ್ರಚಾರ ನಡೆಸಲಾಗುತ್ತಿದೆ ಇದನ್ನು ಖಂಡಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ವತಿಯಿಂದ ತಾಲೂಕು ಮಟ್ಟದಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗುತ್ತಿದೆ ಎಂದು ವೇದಿಕೆ ಸಂಚಾಲಕ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳಂಕ ತರುತ್ತಿರುವುದನ್ನು ವಿರೋಧಿಸಿ ಸೆ.10ರಂದು ಬೆಳಗ್ಗೆ 10 ಗಂಟೆಗೆ ಕುಕ್ಕುಂದೂರು ಗ್ರಾ.ಪಂ. ಎದುರಿನ ಮೈದಾನದಲ್ಲಿ ಜನಾಗ್ರಹ ಸಭೆ ನಡೆಯಲಿದೆ. ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಹಾಗೂ ಕರ್ನಾಟಕ ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠದ ವಿಖ್ಯಾತಾನಂದ ಸ್ವಾಮೀಜಿ, ಬೈಲೂರು ಶ್ರೀ ರಾಮಕೃಷ್ಣ ಆಶ್ರಮದ ಆಧ್ಯಾತ್ಮಿಕ ಮಾರ್ಗದರ್ಶಕ ಸ್ವಾಮಿ ವಿನಾಯಕನಂದಜೀ ಮಹಾರಾಜ್ ಸಹಿತ ಮೊದಲಾದ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು. ಕಾರ್ಕಳ ತಾಲೂಕಿನ ವಿವಿಧ ಭಾಗದಿಂದ 8 ಸಾವಿರಕ್ಕೂ ಅಧಿಕ ಮಂದಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಅಪಪ್ರಚಾರಕ್ಕೆ ಸಂಚು ರೂಪಿಸಲಾಗಿದ್ದು, ಎಸ್‌ಐಟಿ ತನಿಖೆಯನ್ನೇ ದಾರಿ ತಪ್ಪಿಸಿದ್ದಾರೆ. ಎಲ್ಲ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸೌಜನ್ಯ ಪ್ರಕರಣದಲ್ಲಿ ಯಾರೆ ತಪ್ಪು ಮಾಡಿದರೂ ಅವರಿಗೂ ಶಿಕ್ಷೆಯಾಗಬೇಕು. ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ಕುಟುಂಬಸ್ಥರು ಮೇಲ್ಮನವಿ ಸಲ್ಲಿಸಬೇಕು. ಇದಕ್ಕೆ ಸಂಪೂರ್ಣ ವೆಚ್ಛ ಭರಿಸಲು ಹಿಂದು ಸಮಾಜ ಸಿದ್ಧವಿದೆ ಎಂದರು. ಪ್ರಮುಖರಾದ ಉದಯ್ ಕುಮಾರ್ ಹೆಗ್ಡೆ, ಭಾಸ್ಕರ್ ಎಸ್. ಕೋಟ್ಯಾನ್, ರವೀಂದ್ರ ಫ್ರಭು ಕಡಾರಿ, ವೃಷಭರಾಜ್ ಕಡಂಬ, ಮೋಹನ್ ಪಡಿವಾಳ, ಕಮಲಾಕ್ಷ ನಾಯಕ್, ಪ್ರಭತ್ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net