ಮೈಸೂರಿನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ

Published on

ಮೈಸೂರು: ನಗರದ ಈದ್ಗಾ ಮೈದಾನದಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಶನಿವಾರ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.

ಉಡುಪಿ ಜಿಲ್ಲಾ ಜನಾಬ್ ಅಕ್ಬರ್ ಅಲಿ ಮಾತನಾಡಿ, ಚರ್ಚ್‌ಗಳ ಬಳಿಯಲ್ಲಿ ಹಾಗೂ ಮಠಮಂದಿರಗಳ ಬಳಿಯಲ್ಲಿರುವ ಭೂಮಿಯ ಬಗ್ಗೆ ಸರ್ಕಾರ ಮಾತನಾಡುತ್ತಿಲ್ಲ. ಆದರೆ, ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಮುಂದಾಗಿರುವುದು ಖಂಡನೀಯ ಎಂದರು.

ವಕ್ಫ್ ಹೋರಾಟ ಜತೆಗೆ ಸಂವಿಧಾನ ಉಳಿವಿಗೆ ನಾವು ಹೋರಾಟ ಮಾಡಬೇಕಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ಜತೆಗೆ ಮುಸ್ಲಿಂರ ವಕ್ಫ್ ಆಡಳಿತ ಮಂಡಳಿಯನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇಸ್ಲಾಂ ಧರ್ಮದ ಪ್ರಕಾರ ಪವಿತ್ರ ಭೂಮಿಯನ್ನು ಮಾತ್ರ ದಾನ ವಾಡಲಾಗುತ್ತದೆ. ಉಪವಾಸ ವ್ರತ ಮಾಡುವಾಗ ನೀಡಿದ ದಾನ ಹಲಾಲ್ ಆಗಿರುತ್ತದೆ. ದಾನ ಕೊಡುವ ಜಮೀನು ಸರ್ಕಾರಕ್ಕೆ ಸೇರಿದಲ್ಲ ಎಂದರು.

ವಕ್ಫ್ ಆಸ್ತಿ ದುರ್ಬಳಕೆಯಾಗಿರುವುದು ನಿಜ. ಸರ್ಕಾರ, ರಾಜಕೀಯ ನಾಯಕರು ಒತ್ತುವರಿ ಮಾಡಿದ್ದಾರೆ. ನಮ್ಮ ಜಮೀನನ್ನು ನಾವು ರಕ್ಷಿಸಕೊಳ್ಳಲು ನೋಟೀಸ್ ನೀಡುತ್ತೇವೆಯೇ ಹೊರತು ಒಕ್ಕಲೆಬ್ಬಿಸಲು ಅಲ್ಲ. ಆದರೆ, ವಕ್ಫ್ ಆಸ್ತಿ ವಿಚಾರವಾಗಿ ಕೇಂದ್ರ ಸರ್ಕಾರ ಜನರಲ್ಲಿ ತಪ್ಪು ಮೂಡಿಸುವ ಹಾಗೂ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೃತ್ತ ಡಿವೈಎಸ್‌ಪಿ ಸುಹೇಲ್ ವಾತನಾಡಿ, ಮುಸ್ಲಿಮರು ಧಾರ್ಮಿಕ ಹಕ್ಕುಗಳಿಗೆ ಮಾತ್ರವಲ್ಲ ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಹೋರಾಟ ಮಾಡಬೇಕಿದೆ. ನಾನು ಕೇಂದ್ರ ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧ ಬಂಡಾಯ ಸಾರಿ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ. ನಿವೃತ್ತಿ ನಂತರ ಮನೆಯಲ್ಲಿ ಕೂರಲು ಬಯಸದೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ ಎಂದು ಹೇಳಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ದೇಶದಲ್ಲಿ ಎಲ್ಲ ಧರ್ಮಿಯರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದೇವೆ. ವಕ್ಫ್ ತಿದ್ದುಪಡಿ ಸಂವಿಧಾನ ವಿರೋಧಿಯಾಗಿದೆ. ಸರ್ಕಾರ ಜನರ ಮನಸ್ಸುಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದು, ನಾವು ಮನಸ್ಸುಗಳನ್ನು ಕಟ್ಟುವ ಕಾರ್ಯ ಮಾಡಬೇಕು ಎಂದರು.

ಸಾಮಾಜಿಕ ಹೋರಾಟಗಾರ ಎಚ್.ವಿ.ವಾಸು ಮಾತನಾಡಿ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಸಂವಿಧಾನದ ಆಶಯಗಳು ಬುಡಮೇಲು ಆಗುತ್ತಿದೆ. ವಕ್ಫ್ ಆಸ್ತಿ ಜನರ ಆಸ್ತಿಯಾಗಿದ್ದು, ಇದು ಸಮುದಾಯದ ಒಳಿತಿಗಾಗಿ ನೀಡಿರುವ ಸಂಪತ್ತು. ಮೋದಿ ಸರ್ಕಾರದಿಂದ ಇದನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಸಂಚಾಲಕ ಬೆಟ್ಟಯ್ಯಕೋಟೆ ಮಾತನಾಡಿ, ದೇಶವನ್ನು ವಿಭಜನೆ ಮಾಡುವ ಹುನ್ನಾರ ನಡೆಯುತ್ತಿದೆ. ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ರಥಯಾತ್ರೆ ಮೂಲಕ ಧರ್ಮದ ವಿಷಬೀಜವನ್ನು ದೇಶದ ಉದ್ದಗಲಕ್ಕೂ ಬಿತ್ತಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಹಾಗೂ ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು ಹೋರಾಟ ನಡೆಸುವ ಎಂದು ಕರೆ ನೀಡಿದರು.

ಸಮಾವೇಶದಲ್ಲಿ ಮೌಲಾನ ಉಸ್ಮಾನ್ ಷರೀಫ್, ಮೌಲಾನ ತಾಜುದ್ದೀನ್, ಮೌಲಾನ ಹಫೀಜ್ ಹರ್ಷದ್, ಮೌಲನಾ ಜಹೀರ್, ಶಾಹುದ್ ವುಲ್ಲಾ, ಕಲೀಂ ಷಾ, ಜಫೀವುಲ್ಲಾ, ಅಜೀಂ ಷಾ, ನೂರುದ್ದೀನ್, ಶಾಸಕ ತನ್ವೀರ್ ಸೇಠ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಮೇಯರ್ ಆರಿಫ್ ಹುಸೇನ್, ಮಾಜಿ ಉಪ ಮೇಯರ್‌ಗಳಾದ ಅನ್ವರ್ ಬೇಗ್, ಷಫಿ ಅಹಮದ್, ನಗರಪಾಲಿಕೆ ಮಾಜಿ ಸದಸ್ಯರಾದ ಸುಹೇಲ್ ಬೇಗ್, ಸೈಯದ್ ಅಸ್ರತ್, ಸೈಯದ್ ಅಕ್ರಂ, ಸೈದ್‌ ಪಾಷ, ಅಯಾಜ್ ಪಾಷ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net