ಬೃಹತ್ ಪ್ರತಿಭಟನಾ ಮೆರವಣಿಗೆ 20ರಂದು

raita sangha
Published on

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನ. 20ರಂದು ಬೆಳಗ್ಗೆ 10 ಗಂಟೆಗೆ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಸೇನೆ ಅಧ್ಯಕ್ಷ ವಾಸುದೇವ ಮೇಟಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಇಲ್ಲಿನ ಸ್ಟೇಷನ್ ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಯಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. 30 ಜಿಲ್ಲೆಯ 5 ಸಾವಿರ ರೈತರು ಹಾಗೂ ಸಕಲ ವಾದ್ಯ ಮೇಳಗಳು ಭಾಗವಹಿಸಲಿವೆ ಎಂದರು.

ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ, ಬೆಣ್ಣಿಹಳ್ಳ ಸೇರಿ ಇತರ ಉಪಹಳ್ಳಗಳಿಗೆ ಯೋಜನೆ ರೂಪಿಸಿ ಈ ನೀರನ್ನು ರೈತರಿಗೆ ಸದುಪಯೋಗುವಂತೆ ಮಾಡಬೇಕು. ಆಲಮಟ್ಟಿ ಜಲಾಶಯದ ಅಣೆಕಟ್ಟು ಎತ್ತರ ಹೆಚ್ಚಿಸಬೇಕು. ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣ ಮಾಡಬೇಕು. ಬರಗಾಲ ಇರುವುದರಿಂದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಬೆಳೆ ಪರಿಹಾರ, ಬೆಳೆವಿಮೆ ಕೊಡಬೇಕು. ರೈತರ ಬೆಳೆಗೆ ಕಾನೂನಾತ್ಮಕ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಲಾಗುವುದು ಎಂದರು.

ಕಳಸಾ -ಬಂಡೂರಿ ಯೋಜನೆ ಜಾರಿಗೆ ಮಾಡುವುದಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭರವಸೆ ಕೊಟ್ಟು ತಪ್ಪಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ಈ ಯೋಜನೆ ಜಾರಿಗೊಳಿಸಬೇಕು. ರೈತರಿಗೆ 12 ಗಂಟೆ ನಿರಂತರ ವಿದ್ಯುತ್ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುನ್ನೂರ, ಬಿ.ಎಸ್. ಬೆಳ್ಳಿಗಟ್ಟಿ, ಚಂದ್ರಕಾಂತ ಕಟಗಿ, ಅನ್ನಪೂರ್ಣ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net