ಭಟ್ಕಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

BKL VENKATESH NAIK
Published on

ಭಟ್ಕಳ: ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ ನಿರಂತರವಾಗಿ ನಡೆಯುತ್ತಿರುವ ಹಿಂದುಗಳ ದೌರ್ಜನ್ಯ ಖಂಡಿಸಿ ಇಲ್ಲಿನ ವಿಶ್ವ ಹಿಂದು ಪರಿಷತ್ ಮತ್ತು ಹಿಂದು ಜಾಗರಣ ವೇದಿಕೆ ಭಟ್ಕಳ ಘಟಕ ಹಾಗೂ ಭಟ್ಕಳ ಸಮಸ್ತ ಹಿಂದು ಸಮಾಜದ ಸಹಭಾಗಿತ್ವದಲ್ಲಿ ಡಿ. 13ರಂದು ಸಂಜೆ 4 ಗಂಟೆಗೆ ಪಕ್ಷಾತೀತವಾಗಿ ನಡೆಯುವ ಬೃಹತ್ ಪ್ರತಿಭಟನಾ ಮೆರವಣಿಗೆಗೆ ನಮ್ಮ ಬೆಂಬಲವಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಾಂಗ್ಲಾದೇಶದಲ್ಲಿ ಹಿಂದುಗಳ ಮಾರಣ ಹೋಮ, ಮಹಿಳೆಯರ ಮೇಲಿನ ಅತ್ಯಾಚಾರ ಸೇರಿ ಸಾಕಷ್ಟು ದುರಂತಗಳು ನಡೆಯುತ್ತಿದೆ. ಇಂತಹ ಕೃತ್ಯ ನಡೆಯಬಾರದು. ಯಾರ ಜೀವದ ಜತೆ ಚೆಲ್ಲಾಟ ಆಡುವುದನ್ನು ನಾವು ಸಹಿಸುವುದಿಲ್ಲ. ಆದರೆ, ನಾವು ಪ್ರತಿಭಟನೆ ಮಾಡಿದರೆ ಸಾಕಾಗುವುದಿಲ್ಲ. ನಮ್ಮ ಪ್ರಧಾನಿಗಳು ಈ ಕುರಿತು ದಿಟ್ಟ ಹೆಜ್ಜೆ ತೆಗೆದುಕೊಳ್ಳಬೇಕು. ಮಾತೆತ್ತಿದರೆ ಹಿಂದು ಎನ್ನುವ ಪ್ರಧಾನಿಗಳು ಅಲ್ಲಿ ಹಿಂಸಾಚಾರ ಆರಂಭವಾಗಿ 6 ತಿಂಗಳು ಕಳೆದರೂ ಇನ್ನು ಯಾವುದೆ ತಿರ್ವನಕ್ಕೆ ಬಂದಿಲ್ಲ. ಈ ಕುರಿತು ಅವರು ಒಂದೇ ಒಂದು ಹೇಳಿಕೆ ನೀಡದಿರುವುದು ದುರದೃಷ್ಟಕರ. ಈ ಕುರಿತು ಬಾಂಗ್ಲಾ ದೇಶಕ್ಕೆ ಖಡಕ್ ಎಚ್ಚರಿಕೆ ನೀಡಬೇಕಿತ್ತು. ಮಾರಣಹೋಮ ನಿಲ್ಲಿಸುವಂತೆ ಒತ್ತಡ ಹೇರಬೇಕಿತ್ತು. ಇನ್ನಾದರೂ ಇದನ್ನು ಗಂಭಿರವಾಗಿ ಪರಿಗಣಿಸಿ ಬಾಂಗ್ಲಾದೇಶದ ಹಿಂದುಗಳ ನೆರವಿಗೆ ಮುಂದಾಗಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಮಸ್ಯೆಯನ್ನು ಬಿಂಬಿಸಿ ದೌರ್ಜನ್ಯಕ್ಕೆ ಕೊನೆಗಾಣಿಸಬೇಕಾಗಿದೆ. ಕೇಂದ್ರ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಬೇಕಾಗಿದೆ ಎಂದರು.

ಈ ವಿಷಯದಲ್ಲಿ ನಮ್ಮ ಬ್ಲಾಕ್ ಕಾಂಗ್ರೆಸ್, ನಮ್ಮ ನಾಯಕರಾದ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net