ಕೊಡಗು ಜಿಲ್ಲಾ ಕ್ರೈಸ್ತ ಸಮುದಾಯದಿಂದ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ

28adarshkdga3
Published on

ಮಡಿಕೇರಿ: ಮಣಿಪುರದಲ್ಲಿ ಕ್ರೈಸ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೊಡಗು ಜಿಲ್ಲಾ ಕ್ರೈಸ್ತ ಸಮುದಾಯದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.


ನಗರದ ಸಂತ ಮೈಕಲರ ದೇವಾಲಯದಲ್ಲಿ ಜಮಾಯಿಸಿದ ಕ್ರೈಸ್ತ ಬಾಂಧವರು, ಚರ್ಚ್‌ನಲ್ಲಿ ಹಿಂಸಾಚಾರ ಕೊನೆಯಾಗಲು ಕೈಗೆ ಕಪ್ಪು ಪಟ್ಟಿ ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಾಲಯದಿಂದ ಇಂದಿರಾಗಾಂಧಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಿದರು. ಮೆರವಣಿಗೆಯುದ್ದಕ್ಕೂ ಮಣಿಪುರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಅಲ್ಲಿನ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ರಾಜೀನಾಮೆಗೆ ಆಗ್ರಹಿಸಿದರು. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಹಿಂಸಾಚಾರ ಅಂತ್ಯಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮೆರವಣಿಗೆಯಲ್ಲಿ ಶವಪೆಟ್ಟಿಗೆಯನ್ನು ಹೊತ್ತೊಯ್ಯುವ ಮೂಲಕ ದೌರ್ಜನ್ಯವನ್ನು ಖಂಡಿಸಲಾಯಿತು.


ಈ ಸಂದರ್ಭ ಮಾತನಾಡಿದ ಕ್ರೈಸ್ತ ಮುಖಂಡ ಸುನಿಲ್ ಪತ್ರಾವೊ, ಮಣಿಪುರದಲ್ಲಿ ನಿರಂತರವಾಗಿ ಕ್ರೈಸ್ತರು, ಅವರ ಪ್ರಾರ್ಥನಾ ಮಂದಿರ, ಆಸ್ತಿಪಾಸ್ತಿಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಅಲ್ಲಿನ ಚುನಾಯಿತ ಸರ್ಕಾರ ರಾಜ್ಯಧರ್ಮ ಪಾಲಿಸಲು ನಿಷ್ಕ್ರಿಯವಾಗಿದೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಇಬ್ಬಾಗ ನೀತಿ ಅನುಸರಿಸಲಾಗುತ್ತಿದೆ. ಘಟನೆಯನ್ನು ಖಂಡಿಸಿ ಕೊಡಗು ಜಿಲ್ಲೆಯ ಕ್ರೈಸ್ತ ಸಮುದಾಯದಿಂದ ರಾಜಕೀಯರಹಿತ ಹೋರಾಟ ಮಾಡಲಾಗಿದೆ. ಮಾನವ ಹಕ್ಕುಗಳ ಆಯೋಗ ಮಧ್ಯೆ ಪ್ರವೇಶಿಸಿ ಕ್ರೈಸ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕೊನೆಗಾಣಿಸಬೇಕೆಂದು ಆಗ್ರಹಿಸಿದರು.


ವಿರಾಜಪೇಟೆ ಧರ್ಮಕೇಂದ್ರದ ಗುರುಗಳಾದ ಫಾ.ಡಾ.ದಯಾನಂದ ಪ್ರಭು ಮಾತನಾಡಿ, ಒಂದು ಕಾಲದಲ್ಲಿ ಅಲ್ಲಿನ ಎಲ್ಲಾ ಜನಾಂಗಗಳು ಪ್ರೀತಿ ವಿಶ್ವಾಸದಿಂದ ಬಾಳುತ್ತಿದ್ದರು. ಆದರೆ, ಡಬಲ್ ಎಂಜಿನ್ ಸರ್ಕಾರ ಅಲ್ಲಿನ ಜನತೆಗೆ ಒಳ್ಳೆಯದರ ಬದಲು ಕೆಟ್ಟದನ್ನೇ ಮಾಡುತ್ತಿದೆ. ಅಭಿವೃದ್ಧಿ, ಶಾಂತಿ ಸಮಾಧಾನಕ್ಕೆ ಒತ್ತುಕೊಡಬೇಕಾದ ಸರ್ಕಾರ, ಅಸಂಖ್ಯಾತ ಕ್ರೈಸ್ತರ ಮೇಲೆ ದೌರ್ಜನ್ಯ ಮಾಡುತ್ತಿದೆ. ಈಗಾಗಲೇ ೧೩೦ಕ್ಕಿಂತ ಅಧಿಕ ಮಂದಿ ಕ್ರೈಸ್ತರು ಪ್ರಾಣ ಕಳೆದುಕೊಂಡಿದ್ದಾರೆ. ೨೫೦ ಚರ್ಚ್‌ಗಳನ್ನು ಕೆಡವಿ ಹಾಕಲಾಗಿದೆ. ಮನೆ ಕಟ್ಟಡಗಳಿಗೆ ನಿರಂತರವಾಗಿ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ರಾಷ್ಟ್ರಪತಿಗಳು, ಕೇಂದ್ರ ಮಾನವ ಹಕ್ಕು ಆಯೋಗ, ಮತ್ತಿತರರಿಗೆ ಜಿಲ್ಲಾಡಳಿತ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.


ವಿವಿಧ ಧರ್ಮಕೇಂದ್ರದ ಧರ್ಮಗುರುಗಳಾದ ಫಾ.ನವೀನ್ ಕುಮಾರ್, ಮಡಿಕೇರಿ ಸ0ತ ಮೈಕಲರ ದೇವಾಲಯದ ಧರ್ಮಗುರು ಫಾ. ಜಾರ್ಜ್ ದೀಪಕ್, ಐಸಾಕ್ ರತ್ನಾಕರ್, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಸ್ಥಾಪಕಾಧ್ಯಕ್ಷ ಲಾರೆನ್ಸ್, ಉಪಾಧ್ಯಕ್ಷ ಜಾನ್ಸನ್ ಪಿಂಟೋ, ಕ್ರೈಸ್ತ ಮುಖಂಡರಾದ ಬೇಬಿ ಮ್ಯಾಥ್ಯೂ, ಜೋಕಿಂ ರಾಡ್ರಿಗಸ್, ತೆರೆಸಾ ವಿಕ್ಟರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net