

ಜಮಖಂಡಿ: ಲಿಕ್ಕ್ ಮಾರಾಟ ಮಾಡುವ ಸಂಘದವರ ಅಕ್ರಮ ಮಾರಾಟಕ್ಕೆ ಲಗಾಮ ಹಾಕಲು ಮುಂದಾದ ಸಚಿವರ ಮೇಲೆ ಸುಳ್ಳು ಆರೋಪ ಹೊರಿಸುತಿರುವುದನ್ನು ಖಂಡಿಸಿ ನ.12 ರಂದು ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಕಾಂಗ್ರೆಸ್ ಮುಖಂಡ ತೌಫಿಕ್ ಪಾರ್ಥನಳ್ಳಿ ತಿಳಿಸಿದರು.
ನಗರದ ರಮಾ ನಿವಾಸದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಲಿಕ್ಕ್ ಮಾರಾಟಗಾರರು ತಾವು ಹೇಳಿದಂತೆ ನಡೆದುಕೊಳ್ಳಬೇಕೆಂಬ ಮನಸ್ಥಿಯಲ್ಲಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಂಡರೆ ಸುಳ್ಳು ಆರೋಪ ಹೊರಿಸುವ ಕೆಲಸ ಮಾಡುತಿದ್ದಾರೆ. ಇದನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ನಾಚಿಗೇಡಿತನ ಎಂದರು.
ಅಹಿಂದ ನಾಯಕರು ಯಾವುದೇ ಸ್ಥಾನಮಾನದಲ್ಲಿರುವುದು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಸಿಎಂ ಸಿದ್ದರಾಮಯ್ಯ ಅವರ ಜತೆ ಒಳ್ಳೆಯ ಒಡನಾಟ ಹೊಂದಿರುವವರ ಮೇಲೆ ಸುಳ್ಳು ಆರೋಪ ಮಾಡುತ್ತ ಕಳಂಕ ಹಚ್ಚುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದರು.
ವಾರಕ್ಕೆ 18 ಕೋಟಿ ರೂ. ಹಪ್ತಾ ವಸೂಲಿ ಮಾಡುತ್ತಾರೆ ಎನ್ನುತ್ತಾರೆ, ಇದಕ್ಕೆ ಸಾಕ್ಷಿ ಸಾಬೀತುಪಡಿಸಲಿ, ಅಬಕಾರಿಯಿಂದ 700 ಕೋಟಿ ರೂ. ಅವ್ಯವಹಾರವಾಗಿದೆ ಎಂದು ಪ್ರಧಾನಿ ಅವರು ಹೇಳುತ್ತಾರೆ. ಆದರೆ, ಅದನ್ನು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರ ಸವಾಲಿಗೆ ಅವರು ಸಿದ್ಧರಿದ್ದಾರಾ ಎಂದು ಪ್ರಶ್ನಿಸಿದರು.
ದಲಿತ ಸಚಿವರನ್ನೇ ಮಾತ್ರ ಟಾರ್ಗೆಟ್ ಮಾಡಲಾಗುತ್ತಿದ್ದು, ಇದಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಅಂದು ನಡೆಯುವ ಪ್ರತಿಭಟನಾ ರ‌್ಯಾಲಿಯಲ್ಲಿ ಅಂದಾಜು 10 ಸಾವಿರ ಜನಸಂಖ್ಯೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸಿದ್ದು ಮಿಶಿ ಮಾತನಾಡಿ, ಸಚಿವ ತಿಮ್ಮಾಪೂರ ಅವರು ರಾಜ್ಯದ ಧೀಮಂತ ನಾಯಕ, ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಅವರಂತೆ ಅಕ್ರಮ ಆಸ್ತಿ ಮಾಡಿಲ್ಲ. ಯಾರು ಅಕ್ರಮದಲ್ಲಿ ತೊಡಗಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ತಿಮ್ಮಾಪೂರ ಅವರ ಮೇಲೆ ವಿನಾಕಾರಣ ಕಳಂಕ ತರಲು ಮುಂದಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಶ್ಯಾಮರಾವ ಘಾಟಗೆ, ಡಿಎಸ್‌ಎಸ್ ಮುಖಂಡ ಶಂಕರ ಕಾಂಬಳೆ, ಡಿಎಸ್‌ಎಸ್ ಮುಖಂಡ ಮುತ್ತಣ್ಣ ಮೇತ್ರಿ ಮಾತನಾಡಿ, ನ.21ರಿಂದ ಲಿಕ್ಕರ್ ಮಾರಾಟಗಾರರ ಅಕ್ರಮ ಖಂಡಿಸಿ ದಲಿತ ಸಂಘಟನೆಗಳಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದೆಂದು ತಿಳಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ ಕೋಳಿ, ಈಶ್ವರ ವಾಳೆನ್ನವರ, ನಾಗಪ್ಪ ಹೆಗಡೆ, ರಾಜು ಲೊಕಂಡೆ, ಹಣಮಂತ ತೇಲಿ, ಯಾಸೀನ ಅಥಣಿಕರ, ಮಹಾಂತೇಶ ಗದ್ಯಾಳ, ಅರುಣ ಲಗಳಿ, ರಮೇಶ ಪೂಜಾರಿ, ಸಂಜು ಪೂಜಾರಿ, ಸಂಜು ಮುಂಡಗನೂರ, ಈರಣ್ಣ ರಾಮೋಶಿ ಇತರರಿದ್ದರು.