

ಮಂಗಳೂರು: ಜಿಲ್ಲೆಯಾದ್ಯಂತ ಕಾನೂನು ಮೀರಿ ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಹಾಗೂ ಗೋಹತ್ಯೆ ನಡೆಸುವ ದೊಡ್ಡ ಗೋಮಾಂಸ ಮಾಫಿಯಾ ಕಾರ್ಯಾಚರಿಸುತ್ತಿದೆ. ಜಿಲ್ಲಾಡಳಿತ ಈ ಮಾಫಿಯಾವನ್ನು ಒಂದು ತಿಂಗಳೊಳಗೆ ಮಟ್ಟ ಹಾಕದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಂದು ವಿಹಿಂಪ ಸುರತ್ಕಲ್ ಪ್ರಖಂಡ ಅಧ್ಯಕ್ಷ ಭಾಸ್ಕರ್ ರಾವ್ ಬಾಳ ಹೇಳಿದೆರು.
ಗುರುವಾರ ಕದ್ರಿ ವಿಎಚ್‌ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.7ರಂದು ಸುರತ್ಕಲ್ ಕೃಷ್ಣಾಪುರದ ಎಂಟನೇ ಬ್ಲಾಕ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆ ಬಗ್ಗೆ ಬಜರಂಗದಳ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದಾಗ ಮನೆಯೊಳಗೆ ಗೋವಧೆ ನಡೆಯುತ್ತಿದ್ದುದು ಕಂಡುಬಂದಿತ್ತು. ನೂರಾರು ಕೆ.ಜಿ. ಗೋಮಾಂಸ, 19 ಜೀವಂತ ಗೋವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಾತ್ರ ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನ ಆಗಿಲ್ಲ, ಮುಂದಿನ ಯಾವುದೇ ಕ್ರಮವನ್ನು ಪೊಲೀಸರು ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜು.25ರಂದು ಸುರತ್ಕಲ್‌ನಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಿ, ಅಕ್ರಮ ಕಸಾಯಿಖಾನೆಗಳನ್ನು ಶೀಘ್ರದಲ್ಲಿ ಮುಚ್ಚಿಸುವ ಭರವಸೆಯನ್ನು ಪೊಲೀಸರು ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ತಿಳಿಸಿದರು.
*ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಲು ಕ್ರಮ
ಸುರತ್ಕಲ್, ಜೋಕಟ್ಟೆ, ಕೃಷ್ಣಾಪುರ, ತಣ್ಣೀರುಬಾವಿ, ಬಜ್ಪೆ, ಉಳ್ಳಾಲ ಸಹಿತ ಹಲವಾರು ಕಡೆ ಅಕ್ರಮ ಕಸಾಯಿಖಾನೆಗಳಿದ್ದು, ಅಲ್ಲಿಗೆ ಗೋವುಗಳನ್ನು ಪೂರೈಸುವ ಹಾಗೂ ಮಾಂಸ ಕೊಂಡೊಯ್ಯುವ ಜಾಲವನ್ನು ಪತ್ತೆಹಚ್ಚಿ ಬಂಧಿಸಬೇಕು, ಎಲ್ಲ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಲು ಕ್ರಮ ಕೈಗೊಂಡು, ಅದೇ ಜಾಗದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತೆ ಗೋವಧೆ ಆಗದಂತೆ ನಿರಂತರ ಪೊಲೀಸ್ ನಿಗಾ ಇಡಬೇಕು. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವು ಕಡೆ ಮಾಂಸದ ಅಂಗಡಿಯ ಲೈಸೆನ್ಸ್ ಪಡೆದು ದನದ ಮಾಂಸ ಮಾರಾಟ ಮಾಡಲಾಗುತ್ತಿದೆ. ಇದರ ಬಗ್ಗೆ ನಿಗಾ ವಹಿಸಿ, ಗೋಮಾಂಸ ಪೂರೈಕೆ ಎಲ್ಲಿಂದ ಆಗುತ್ತಿದೆ ಎಂಬುದನ್ನು ಪತ್ತೆಮಾಡಿ ಗೋಮಾಂಸ ಸರಬರಾಜು ಮಾಡುವ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಬೇಕು, ಹೋಟೆಲ್‌ಗಳಿಗೆ ಗೋಮಾಂಸ ಪೂರೈಕೆ ಮಾಡುವವರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಇದುವರೆಗೆ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಿರುವ ಕಸಾಯಿಖಾನೆಗಳ ಕಟ್ಟಡಗಳನ್ನು ಮುಟ್ಟುಗೋಲು ಹಾಕಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಅಕ್ರಮ ಕಸಾಯಿಖಾನೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂಬ ಪೊಲೀಸರ ಭರವಸೆಯಂತೆ ಸುರತ್ಕಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಮುಂದೂಡಿದ್ದೇವೆ. ಪೊಲೀಸರಿಗೆ ಒಂದು ತಿಂಗಳ ಗಡುವು ನೀಡುತ್ತಿದ್ದೇವೆ. ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸದಿದ್ದರೆ ಜಿಲ್ಲಾ ಮಟ್ಟದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ. ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ನಾವೇ ನುಗ್ಗಿ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಿಸುತ್ತೇವೆ ಎಂದು ಭಾಸ್ಕರ್ ರಾವ್ ಬಾಳ ಹೇಳಿದರು.
ವಿಹಿಂಪ ಸುರತ್ಕಲ್ ಪ್ರಖಂಡ ಕಾರ್ಯದರ್ಶಿ ಜಯರಾಮ ಆಚಾರ್ಯ, ಬಜರಂಗದಳ ಜಿಲ್ಲಾ ಸಹಸಂಯೋಜಕ್ ಪ್ರೀತಮ್ ಕಾಟಿಪಳ್ಳಘಿ, ಹಿಂಜಾವೇ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬಾಲಕೃಷ್ಣ ಮುಂಚೂರು, ಹಿಂಜಾವೇ ಜಿಲ್ಲಾ ಸಮಿತಿ ಸದಸ್ಯ ಪುಷ್ಪರಾಜ್ ಕುಳಾಯಿ ಉಪಸ್ಥಿತರಿದ್ದರು.