

ರಬಕವಿ/ಬನಹಟ್ಟಿ : ರಾಜ್ಯ ಆಡಳಿತದಲ್ಲಿರುವ ಕಾಂಗ್ರೆಸ್ ವಕ್ಫ್ ಮಂಡಳಿ ಮೂಲಕ ಜನರನ್ನು ಆತಂಕದ ಸ್ಥಿತಿಗೆ ತಳ್ಳುವುದಕ್ಕೆ ಮುಂದಾಗಿದ್ದು, ಜತೆಗೆ ಸರ್ಕಾರಿ ಅಧೀನದಲ್ಲಿರುವ ಆಸ್ತಿಯನ್ನು ತನ್ನದೆಂದು ವಕ್ಫ್ ಬೋರ್ಡ್ ಹೇಳುತ್ತಿರುವುದನ್ನು ವಿರೋಧಿಸಿ ಬನಹಟ್ಟಿ ನಗರದಲ್ಲಿ ಬಿಜೆಪಿ ಹಾಗೂ ಕಿಸಾನ್ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿ ಗ್ರೇಡ್-2 ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ವಿದ್ಯಾಧರ ಸವದಿ ಮಾತನಾಡಿ, ಒಂದು ಸಮುದಾಯದ ಓಲೈಕೆಯ ದುರ್ವರ್ತನೆಯಿಂದ ಸರ್ವ ಜನಾಂಗಕ್ಕೆ ಅವಮಾನಿಸಿದ ನೀಚ ಸರ್ಕಾರಕ್ಕೆ ಧಿಕ್ಕಾರ. ವಕ್ಫ್ ಕಾನೂನು ರದ್ದುಪಡಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಅಧಿಕಾರಿಗಳನ್ನು ಕೈಗೊಂಬೆಯನ್ನಾಗಿಸಿಕೊಂಡು ಜನಸಾಮಾನ್ಯರ ವಿರೋಧಿ ನೀತಿಗಳನ್ನು ತರುವಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್‌ಅಹ್ಮದ್ ಮುಂದಾಗಿದ್ದಾರೆ. ಸರ್ಕಾರದ ಅವನತಿಗೆ ನಾಂದಿ ಹಾಡುವಲ್ಲಿ ಕಾರಣವಾಗಿದ್ದು, ಇದರ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಜೈಲ್ ಭರೋ ಚಳವಳಿ: 2019ರ ಪೂರ್ವದಲ್ಲೇ ತೇರದಾಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿ 900ಕ್ಕೂ ಅಧಿಕ ಎಕರೆಯಷ್ಟು ವಕ್ಫ್ ಆಸ್ತಿಯನ್ನಾಗಿಸಿದೆ. ಇದೀಗ 1,300 ಎಕರೆ ಹೇಗೆ ನಮೂದಾಗಿದೆ ಎಂಬುದು ಯಾರಿಗೂ ಅರಿವಿಲ್ಲ. ಇವೆಲ್ಲದಕ್ಕೂ ತಿಲಾಂಜಲಿ ನೀಡಿ, ಮರಳಿ ಆಯಾ ರೈತರ ಜಮೀನಿನ ಹಕ್ಕು ನೀಡಬೇಕು. ಇಲ್ಲವಾದಲ್ಲಿ ಸಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುವ ಮೂಲಕ ಜೈಲ್ ಭರೋ ಚಳವಳಿ ನಡೆಸಲಾಗುವುದೆಂದು ಬಿಜೆಪಿ ಮುಖಂಡ ನಂದು ಗಾಯಕವಾಡ ಹೇಳಿದರು.
ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ: ಗ್ರೇಡ್-2 ತಹಸೀಲ್ದಾರ್ ಸತೀಶಕುಮಾರ ಜಿ. ಅವರಿಗೆ ಮನವಿ ನೀಡುವ ಸಂದರ್ಭ ತಾಪಂ ಸದಸ್ಯ ಗುರು ಮರಡಿಮಠ ಆಕ್ರೋಶಭರಿತ ಮಾತುಗಳನ್ನಾಡಿ ಸರ್ಕಾರದ ಗುಲಾಮಗಿರಿಯಾಗಿ ಏಕೆ ಕಾರ್ಯ ನಡೆಸುತ್ತಿದ್ದೀರಿ? ನಿಮಗೆ ರೈತರ ಮೇಲೆ ಅನುಕಂಪವಿಲ್ಲವೇ ಎಂದು ಮಾತನಾಡುತ್ತಿದ್ದಂತೆ ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.
ಇದಕ್ಕೂ ಮುನ್ನ ಬನಹಟ್ಟಿ ನಗರದ ಈಶ್ವರಲಿಂಗ ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ‌್ಯಾಲಿ ನಡೆದು ಎಂ.ಎಂ. ಬಂಗ್ಲೆ ಎದುರು ಮಾನವ ಸರಪಳಿ ನಿರ್ಮಿಸಿದರು.
ಶ್ರೀಶೈಲ ಬೀಳಗಿ, ನಗರಸಭೆ ಅಧ್ಯಕ್ಷೆ ವಿದ್ಯಾ ದಭಾಡಿ, ಸುರೇಶ ಅಕ್ಕಿವಾಟ, ಬಸನಗೌಡ ಪಾಟೀಲ, ಶಂಕರ ಪಾಟೀಲ, ಪುಂಡಲೀಕ ಪಾಲಭಾಂವಿ, ಧರೆಪ್ಪ ಉಳ್ಳಾಗಡ್ಡಿ, ಲಕ್ಕಪ್ಪ ಪಾಟೀಲ, ಮನೋಹರ ಶಿರೋಳ, ಪ್ರಭು ಬಾಗಿ, ಮಹಾದೇವ ಕೋಟ್ಯಾಳ, ಜಿ.ಎಸ್. ಗೊಂಬಿ, ಸಂಜು ತೆಗ್ಗಿ, ಪ್ರಭು ಪೂಜಾರಿ, ಸುಭಾಸ ಚೋಳಿ, ಸುನೀಲ ವಜ್ಜರಮಟ್ಟಿ, ಸವಿತಾ ಹೊಸೂರ, ಪವಿತ್ರಾ ತುಕ್ಕಣ್ಣವರ, ಸುವರ್ಣ ಕೊಪ್ಪದ, ಗೌರಿ ಮಿಳ್ಳಿ, ಅನುರಾಧಾ ಹೊರಟ್ಟಿ, ಸುವರ್ಣ ಸೋಳಂಕಿ, ರೇಖಾ ಕಾಂತಿ, ಆನಂದ ಕಂಪು, ಶಿವು ಕಾಗಿ ಇತರರಿದ್ದರು.