

ಹೊನ್ನಾಳಿ: ಕಳೆದ 40 ವರ್ಷಗಳ ಇತಿಹಾಸದ ರಾಜಕೀಯ ಜೀವನದಲ್ಲಿ ಎಂದಿಗೂ ಭ್ರಷ್ಟಾಚಾರ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿನಾಕಾರಣ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡನೀಯ ಎಂದು ಶಾಸಕ ಡಿ.ಜಿ. ಶಾಂತನಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ, ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಅಹಿಂದ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ವಾಲ್ಮೀಕಿ ಹಾಗೂ ಮುಡಾ ಪ್ರಕರಣಗಳಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಇಲ್ಲದಿದ್ದರೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ವಾಲ್ಮೀಕಿ ಪ್ರಕರಣದಲ್ಲಿ ಅಧಿಕಾರಿ ಚಂದ್ರಶೇಖರನ್ ಮಾನಸಿಕವಾಗಿ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಮಾಜಿ ಸಚಿವ ನಾಗೇಂದ್ರ ಕೈವಾಡ ಇಲ್ಲ. ಆದರೂ ಸಿಎಂ ಸಿದ್ದರಾಮಯ್ಯ ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದಾರೆ ಎಂದರು.
ಅದೇ ರೀತಿ, ಮುಡಾ ಪ್ರಕರಣಲ್ಲಿ ಸಿಎಂ ಅವರ ಯಾವುದೇ ಪಾತ್ರ ಇಲ್ಲ. ಆದರೆ, ವಿರೋಧ ಪಕ್ಷದವರು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದ್ದು, ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕರಣಗಳ ಬಗ್ಗೆ ವಿವರಣೆ ನೀಡುವಾಗ ಕೇಕೆ, ಗದ್ದಲ ಮಾಡಿ ದಾರಿ ತಪ್ಪಿಸಿದರು ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, 5 ಗ್ಯಾರಂಟಿ ಜಾರಿ ಮಾಡಿ ಜನಾನುರಾಗಿಯಾಗಿ ಹೊರ ಹೊಮ್ಮಿರುವ ಸರ್ಕಾರವನ್ನು ಕೇಂದ್ರ ಸರ್ಕಾರ, ರಾಜ್ಯಪಾಲರ ಮೂಲಕ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೊಡಿಸಿರುವುದು ಹೇಡಿತನ ಎಂದು ಟೀಕಿಸಿದರು.
ಮುಖಂಡ ಆರ್. ನಾಗಪ್ಪ, ಪಕ್ಷದ ಮುಖಂಡರಾದ ಎ.ಆರ್. ಚಂದ್ರಶೇಖರ್, ವಾಜೀದ್, ಎಚ್.ಎ. ಉಮಾಪತಿ, ನೆಲಹೊನ್ನೆ ಮೋಹನ್, ಸಣ್ಣಕ್ಕಿ ಬಸವನಗೌಡ, ಅರಕೆರೆ ಮಧುಗೌಡ ಮಾತನಾಡಿದರು.
ಎಚ್.ಎ. ನರಸಿಂಹಪ್ಪ, ಶಿವರಾಮ್‌ನಾಯ್ಕ, ಅರಬಗಟ್ಟೆ ರಮೇಶ್, ತಮ್ಮಣ್ಣ, ಕೊಡತಾಳ್ ರುದ್ರೇಶ್, ವಿಜೇಂದ್ರಪ್ಪ, ಮಹಿಳಾ ಮುಖಂಡರಾದ ಪುಷ್ಪಾ ರವೀಶ್, ವಿನಯ್ ಸೇರಿದಂತೆ ಕಾಂಗ್ರೆಸ್, ಅಹಿಂದ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದ ಸಹಸ್ರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.