ಒಳಮೀಸಲಾತಿ ಜಾರಿಗೆ ಆಗ್ರಹ, ಮಾದಿಗ ಸಮುದಾಯದಿಂದ ಬೃಹತ್ ಪ್ರತಿಭಟನೆ

MADIGA OKKOOTA PROTEST
ವಿಜಯಪುರ ನಗರದ ಜಿಲ್ಲಾಡಳಿತ ಕಚೇರಿ ಎದುರು ಮಾದಿಗ ಸಮುದಾಯದ ವಿವಿಧ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಉಮೇಶ ಕಾರಜೋಳ, ಎಸ್.ಎಸ್. ಲೋಟಗೇರಿ, ಭೀಮು ಮೇಲಿನಮನಿ ಮತ್ತಿತರರಿದ್ದಾರೆ.
Published on

ವಿಜಯಪುರ: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದ ವಿವಿಧ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬೃಹತ್ ಮೆರವಣಿಗೆ ಮೂಲಕ ಜಿಲ್ಲಾಡಳಿತ ಕಚೇರಿಗೆ ಆಗಮಿಸಿದ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರಲ್ಲದೇ ಕೂಡಲೇ ಒಳಮೀಸಲಾತಿ ಜಾರಿಗೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ನೇತೃತ್ವ ವಹಿಸಿದ್ದ ಯುವ ಮುಖಂಡ ಉಮೇಶ ಕಾರಜೋಳ ಮಾತನಾಡಿ, ಒಳಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಸಹ ಅನುಮತಿ ನೀಡಿದೆ. ಆದರೆ ರಾಜ್ಯದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮಾತ್ರ ಇದಕ್ಕೆ ಬೆಲೆ ನೀಡುತ್ತಿಲ್ಲ, ಆ ಮೂಲಕ ಒಳಮೀಸಲಾತಿ ಕಲ್ಪಿಸದೇ ಮಾದಿಗ ಸಮುದಾಯಕ್ಕೆ ದೊಡ್ಡ ಮಟ್ಟದ ಅನ್ಯಾಯ ಮಾಡುತ್ತಿದೆ. ಒಳಮೀಸಲಾತಿ ಎನ್ನುವುದು ಸಂವಿಧಾನ ಕರುಣಿಸಿರುವ ಹಕ್ಕು, ಶೋಷಿತ ಸಮುದಾಯಗಳಲ್ಲಿಯೇ ಅತೀ ಹಿಂದುಳಿದಿರುವ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಲು ಸುಪ್ರೀಂಕೋರ್ಟ್ ಕಳೆದ ವರ್ಷ ಐತಿಹಾಸಿಕ ತೀರ್ಪು ನೀಡಿದೆ, ಆದರೆ ತೀರ್ಪು ನೀಡಿ ಒಂದು ವರ್ಷ ಕಳೆದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಮಾದಿಗ ಸಮಾಜದ ಒಳಮೀಸಲಾತಿ ಜಾರಿಗೊಳಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲ ಸಚಿವ ಸಂಪುಟದಲ್ಲಿಯೇ ಒಳಮೀಸಲಾತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ ನಾಯಕರು ಮಾತು ನೀಡಿದ್ದರು. ಪ್ರಣಾಳಿಕೆಯಲ್ಲೂ ಘೋಷಿಸಿದ್ದರು, ಆದರೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಮ್ಮ ಮಾತು ತಪ್ಪಿ ಕಾಲಹರಣಕ್ಕಾಗಿ ನ್ಯಾ.ನಾಗಮೋಹನ್‌ದಾಸ್ ಆಯೋಗ ರಚಿಸಿತು, ನಂತರ 40 ದಿನಗಳಲ್ಲಿ ವರದಿ ಪಡೆಯುವುದಾಗಿ ಹೇಳಿತು, ಆದರೆ ಆರು ತಿಂಗಳು ಉರುಳಿವೆ. ಅತ್ತ ಸುಪ್ರೀಂಕೋರ್ಟ್ ಒಳಮೀಸಲಾತಿ ತೀರ್ಪು ಪ್ರಕಟಿಸಿ ವರ್ಷ ಕಳೆದು ಹೋಗಿದೆ, ಆದರೂ ನಮ್ಮ ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗಿಲ್ಲ ಎಂದರು.

ಈಗಾಗಲೇ ತೆಲಂಗಾಣ, ಆಂಧ್ರ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಯಾಗಿದೆ. ಒಂದೆಡೆ ಅಹಿಂದ ನಾಯಕರು ಎಂದು ತಮ್ಮ ಬೆನ್ನು ತಟ್ಟಿಕೊಳ್ಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಳಮೀಸಲಾತಿ ಜಾರಿ ಏಕೆ ಮಾಡುತ್ತಿಲ್ಲ? ಯಾವ ಶಕ್ತಿಗಳ ಒತ್ತಡಕ್ಕೆ ಮಣಿದಿದ್ದಾರೆ ಎಂದು ಕಾರಜೋಳ ಖಾರವಾಗಿ ಪ್ರಶ್ನಿಸಿದರು.

ಈ ಅಧಿವೇಶನದ ಒಳಗಾಗಿ ಒಳಮೀಸಲಾತಿ ಜಾರಿಗೊಳಿಸಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಹೋರಾಟದ ಸ್ವರೂಪವನ್ನು ತೀವ್ರಗೊಳಿಸಲಾಗುವುದು. ಈ ನಿರ್ಧಾರಕ್ಕೆ ಸರ್ಕಾರ ಬದ್ಧವಾಗದೇ ಹೋದರೆ ಅಸಹಕಾರ ಮಾದರಿಯಲ್ಲಿ ಬೃಹತ್ ರೂಪದ ಹೋರಾಟಕ್ಕೆ ಅಣಿಯಾಗಲಾಗುವುದು. ಕಾಂಗ್ರೆಸ್ ಶಾಸಕರು ಮತ್ತು ಸಚಿವರಿಗೆ ಸರ್ಕಾರಿ ಕಚೇರಿಗಳಲ್ಲಿ ಬಾಗವಹಿಸಲು ಬಿಡುವುದಿಲ್ಲ, ಅವರ ಕಾರ್ಯ ಚಟುವಟಿಕೆಗಳಿಗೆ ಅಡ್ಡಿಪಡಿಸಿ ನಮ್ಮ ಹೋರಾಟವನ್ನು ತೀವ್ರಗೊಳಿಸಲು ಸಹ ನಾವು ಹಿಂದೇಟು ಹಾಕುವುದಿಲ್ಲ ಎಂದು ಗುಡುಗಿದರು.

ಪ್ರಮುಖರಾದ ಎಸ್.ಎಸ್. ಲೋಟಗೇರಿ, ಭೀಮು ಮೇಲಿನಮನಿ, ಸಿದ್ದು ಪೂಜಾರಿ, ಯಲ್ಲು ಇಂಗಳಗಿ, ಅಶೋಕ ಕರೆಕಲ್, ಸಂತೋಷ ತಳಕೇರಿ, ಸಾಯಬಣ್ಣ ಪುರದಾಳ, ಶಿವು ಬಗಲಿ, ಆಕಾಶ ಮನಗೂಳಿ, ಶ್ರೀನಾಥ ಬೈರವಾಡಗಿ, ಸುರೇಶ ಗಚ್ಚಿನಮನಿ, ಎಂ. ಆರ್. ದೊಡಮನಿ, ಪರಸುರಾಮ ರೋಣಿಹಾಳ, ವಿಠಲ ಆಸಂಗಿ, ದತ್ತು ಬಂಡೆನ್ನವರ, ಸದಾನಂದ ಗುನ್ನಾಪುರ, ವಿಠಲ ನಡುವಿನಕೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net