

ವಿಜಯವಾಣಿ ಸುದ್ದಿಜಾಲ ಉಡುಪಿ
ಮಲ್ಪೆ ಬಂದರಿನಲ್ಲಿ ಮೀನು ಕದ್ದ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಮೀನುಗಾರ ಮಹಿಳೆ ಹಾಗೂ ಓರ್ವ ಮೀನುಗಾರನನ್ನು ಬಂಧಿಸಿರುವ ಪೊಲೀಸ್ ಇಲಾಖೆಯ ಕ್ರಮ ಖಂಡಿಸಿ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ 4 ಸಾವಿರಕ್ಕೂ ಅಧಿಕ ಮೀನುಗಾರರು ಮಾ.22ರಂದು ಬೆಳಗ್ಗೆ ಪ್ರತಿಭಟಿಸಿದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಏಷ್ಯಾದಲ್ಲಿಯೇ ಮಲ್ಪೆ ನಂಬರ್ ಒನ್ ಬಂದರಾಗಿದೆ. ಇಲ್ಲಿ ಯಾವುದೇ ಜಾತಿ, ಮತ, ಪಕ್ಷ, ಪಂಗಡಗಳಿಲ್ಲ. ಇಲ್ಲಿರುವ ಸಾವಿರಾರು ಜನರು ಒಂದೇ ಕುಟುಂಬದಂತೆ ಬದುಕುತ್ತಿದ್ದೇವೆ. ಯಾವುದೇ ಸಮಸ್ಯೆ ಬಂದರೂ ಅದನ್ನು ನಾವೇ ಬಗೆಹರಿಸಿಕೊಳ್ಳುವ ಸಂಪ್ರದಾಯ ಈ ಹಿಂದಿನಿಂದಲೂ ಇಲ್ಲಿದೆ. ಮೊನ್ನೆ ಮಹಿಳೆ ಮೇಲೆ ನಡೆದ ಹಲ್ಲೆಯೂ ಸಹ ಆಕಸ್ಮಿಕ. 15 ಸಾವಿರ ರೂ. ಮೌಲ್ಯದ ಮೀನು ಕದ್ದಿದ್ದರಿಂದ ಸಹಜ ಸಿಟ್ಟಿನಿಂದ ಹೊಡೆದಿದ್ದಾರೆ. ಆದರೆ, ಹಲ್ಲೆ ಮಾಡಿದವರಿಗೆ ಜಾತಿ ನಿಂದನೆ ಆರೋಪ ಹೊರಿಸಿ, ಸುಳ್ಳು ಕೇಸ್ ದಾಖಲಿಸಿ, ಜಾಮೀನು ರಹಿತವಾಗಿ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ಘಟನೆ ಬಳಿಕ ನಾವುಗಳೇ ಪರಸ್ಪರ ರಾಜಿ ಮಾಡಿಕೊಂಡಿದ್ದೆವು. ಆದರೆ, ಹಲ್ಲೆ ನಡೆಸಿದ ವಿಡಿಯೋ ತುಣುಕು ಮಾತ್ರ ತೋರಿಸಿ, ಏಕ ಮುಖವಾಗಿ ದೃಶ್ಯ ಮಾಧ್ಯಮಗಳು ಸುದ್ದಿ ಬಿಂಬಿಸಿದ್ದರಿಂದ ಮಲ್ಪೆ ಮೀನುಗಾರರಿಗೆ ಕಳಂಕ ಬಂದಿದೆ. ಟಿವಿಯಲ್ಲಿ ಸುದ್ದಿ ಬಂತು ಎಂಬ ಕಾರಣಕ್ಕೆ ಪೊಲೀಸರು ಕೇಸ್ ದಾಖಲಿಸುವುದು ಎಷ್ಟು ಸರಿ? ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರಕರಣ ದಾಖಲಿಸಿದ್ದಕ್ಕೆ, ಮಲ್ಪೆ ಮೀನುಗಾರರಿಗೆ ಬಂದಿರುವ ಕಳಂಕ ವಿರೋಧಿಸಿ ಪ್ರತಿಭಟಿಸುತ್ತಿದ್ದೇವೆ ಎಂದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಕ್ರಿಯಾ ಸಮಿತಿ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ಮೊನ್ನೆಯ ಘಟನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ನಮ್ಮ ಹಿತ ಶತ್ರುಗಳು ಮೀನುಗಾರರ ಹೆಸರನ್ನು ಕೆಡಿಸುವ ಕೆಲಸ ಮಾಡಿದ್ದಾರೆ. ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಬಿಂಬಿಸಿದ್ದಾರೆ. ದಲಿತ ಮಹಿಳೆಯೆಂಬ ಕಾರಣಕ್ಕೆ ಹಲ್ಲೆ ಮಾಡಿದ್ದಲ್ಲ. ಮೀನು ಕದ್ದ ಕಾರಣಕ್ಕೆ ಆ ಕ್ಷಣದಲ್ಲಿ ನಡೆದ ಆಕಸ್ಮಿಕ ಘಟನೆಯದು. ನಾವು ಮಾಡಿದ್ದೇ ಸರಿ, ಪೊಲೀಸರು ಮಾಡಿದ್ದು ಸರಿಯಲ್ಲ ಎಂದು ಹೇಳುತ್ತಿಲ್ಲ. ಪೊಲೀಸರು ಈ ಘಟನೆಗೆ ಸಂಬಂಧಿಸಿ ನಡೆದುಕೊಂಡ ರೀತಿ ಸೂಕ್ತವಲ್ಲ. ಕೂಡಲೇ ಬಂಧಿತರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿವಿಧ ಮೀನುಗಾರಿಕಾ ಸಂಘಟನೆಯ ಪ್ರಮುಖರಾದ ಸುಭಾಷ ಎಸ್. ಮೆಂಡನ್, ನಾಗರಾಜ ಸುವರ್ಣ, ಸಾಧು ಸಾಲಿಯಾನ್, ಮೋಹನ ಕುಂದರ್, ಹರಿಶ್ಚಂದ್ರ ಕಾಂಚನ್, ರವಿರಾಜ ಸುವರ್ಣ, ಬೇಬಿ ಎಸ್. ಸಾಲಿಯಾನ್, ಗೀತಾ ಕರ್ಕೇರ, ಗಣೇಶ ಕುಂದರ್, ಇಬ್ರಾಹಿಂ ಸಾಹಿಬ್, ಸುಂದರ ಸಾಲಿಯಾನ್, ರತ್ನಾಕರ ಸಾಲಿಯಾನ್, ರಾಘವ ಕರ್ಕೇರ, ಕರುಣಾಕರ ಬಂಗೇರ, ಪ್ರಸಾದರಾಜ ಕಾಂಚನ್, ಗೋಪಾಲ ಕರ್ಕೇರ ಇತರರಿದ್ದರು.
ಧನಂಜಯ ಕಾಂಚನ್ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಜಗನ್ನಾಥ ಕಡೆಕಾರು ಸ್ವಾಗತಿಸಿದರು. ಚಂದ್ರೇಶ ಪಿತ್ರೋಡಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರತಿಭಟನಾ ಸ್ಥಳಕ್ಕೇ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಬೀದ ಗದ್ಯಾಳ, ಹೆಚ್ಚುವರಿ ಪೊಲೀಸ್ ವರಿಷ್ಠರಾದ ಸಿದ್ಧಲಿಂಗಪ್ಪ, ಪರಮೇಶ್ವರ ಹೆಗಡೆ ಮೀನುಗಾರರಿಂದ ಮನವಿ ಸ್ವೀಕರಿಸಿದರು.
ಮಾಜಿ ಮೀನುಗಾರಿಕಾ ಸಚಿವ ಪ್ರಮೋದ ಮಧ್ವರಾಜ, ಜಿಲ್ಲಾ ಪೊಲೀಸ್ ವರಿಷ್ಠ ಡಾ. ಕೆ.ಅರುಣ ವಿರುದ್ಧ ಏಕವಚನದಲ್ಲೇ ಮಾತನಾಡುತ್ತ ಕಿಡಿಕಾರಿದರು. ಎಸ್ಪಿಯವರೇ, ನಿಮ್ಮ ಮನೆಗೆ ಕಳ್ಳರು ಬಂದಾಗ ಮೊದಲು ನೀನೇನು ಮಾಡುತ್ತೀ? ಅವರು ಯಾವ ಜಾತಿಯವರೆಂದು ನೋಡುತ್ತೀರಾ? ಕದಿಯಲು ಬಂದ ಕಳ್ಳನಿಗೆ ಮಹಾ ಮಂಗಳಾರತಿ ಮಾಡುತ್ತೀರಾ? ಮನೆಗೆ ಕಳ್ಳರು ಬಂದರೆ ಎಲ್ಲರೂ ಏನು ಮಾಡುತ್ತಾರೆ? ಕಟ್ಟಿ ಹಾಕುತ್ತಾರಲ್ಲವೇ? ಕಳ್ಳರು ಸಿಕ್ಕಿಬಿದ್ದರೆ ಕಟ್ಟಿ ಹಾಕಲೇಬೇಕು. ಮೀನುಕದ್ದು ಸಿಕ್ಕುಬಿದ್ದ ಮಹಿಳೆಯೇ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ. ಯಾರ ಮೇಲೂ ನನಗೆ ದ್ವೇಷವಿಲ್ಲ ಎಂದು ಹಲ್ಲೆಗೊಳಗಾದ ಮಹಿಳೆಯೇ ಹೇಳುವಾಗ ಈ ಪೊಲೀಸರಿಗೇನು ಧಾಡಿ? ಜಿಲ್ಲೆಯಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾ ಹತೋಟಿಗೆ ತರಲಾಗದ ಎಸ್ಪಿ, ಅಮಾಯಕ ಮೀನುಗಾರ ಮಹಿಳೆಯರನ್ನು ಜೈಲಿಗೆ ಹಾಕಿದ್ದಾರೆ. ಇಂತಹ ಅಮಾನವೀಯ ಎಸ್ಪಿ ಉಡುಪಿಗೆ ಬೇಕಿಲ್ಲ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವ ಎಸ್ಪಿ ಈ ವರೆಗೆ 67 ಸಿಬ್ಬಂದಿ ಸಸ್ಪೆಂಡ್ ಮಾಡಿದ್ದಾನೆ. ಕೂಡಲೇ ಅವನನ್ನು ಎತ್ತಂಗಡಿ ಮಾಡಬೇಕು ಎಂದರು. ಹೊರ ಜಿಲ್ಲೆಯವರು ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರಿಂದ ಈ ರೀತಿಯ ಘಟನೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕುಳಿತು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಿಗ್ಭ್ರಮೆ ಆಗಿದೆ ಎನ್ನುತ್ತಾರೆ. ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದಾಗ ಸಿದ್ದರಾಮಯ್ಯ ಅವರಿಗೆ ದಿಗ್ಭ್ರಮೆ ಆಗಿಲ್ಲವೇ ಎಂದು ಟೀಕಿಸಿದರು.
ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಕಾಂಚನ್ ರಾಜಕೀಯ ಪ್ರೇರಿತರಾಗಿ ಮಾತನಾಡಿದರು. ಅಲ್ಲದೆ, ಮಾಜಿ ಸಚಿವ ಪ್ರಮೋದ ಮಧ್ವರಾಜ ಅವರ ವಿರುದ್ಧವೂ ಮಾತನಾಡಿದರು. ಇದರಿಂದ ಆಕ್ರೋಶಿತರಾದ ಮೀನುಗಾರರು ವೇದಿಕೆಗೆ ಮುತ್ತಿಗೆ ಹಾಕಿದರು. ಮಾತು ನಿಲ್ಲಿಸಿ ವೇದಿಕೆಯಿಂದದ ಕೆಳಗೆ ಇಳಿಯುವಂತೆ ಹಾಗೂ ಕ್ಷಮೆ ಯಾಚಿಸುವಂತೆ ಘೋಷಣೆ ಕೂಗಿದರು. ಬಳಿಕ ಮುಖಂಡರು ಆಕ್ರೋಶಿತ ಮೀನುಗಾರರನ್ನು ಶಾಂತಗೊಳಿಸಿದರು. ಯಾವುದೇ ಅಹಿತಕರ ಘಟನೆ ಆಗಬಾರದೆಂಬ ಹಿನ್ನೆಲೆಯಲ್ಲಿ ಕೆಲ ನಿಮಿಷದ ಬಳಿಕ ರಮೇಶ ಕಾಂಚನ್ ಅವರನ್ನು ಯೋಗೀಶ ಸಾಲಿಯಾನ್ ಅವರು ಪೊಲೀಸ್ ಭದ್ರತೆಯಲ್ಲಿ ಸಭೆಯಿಂದ ಹೊರನಡೆಯಲು ಸಹಕರಿಸಿದರು. ಈ ವೇಳೆಯೂ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.
1) ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಮೀನುಗಾರರ ವಿರುದ್ಧ ದಾಕಲಾಗಿರುವ ಜಾತಿ ನಿಂದನೆ ಕೇಸ್ ಹಿಂಪಡೆದು ಐವರನ್ನೂ ಕೂಡಲೇ ಬಿಡುಗಡೆ ಮಾಡಬೇಕು. 2) ಮಲ್ಪೆ ಬಂದರಿನಲ್ಲಿ ಕಳ್ಳತನ ಮಾಡುವವರಿಗೆ ಭದ್ರತೆ ಕೊಟ್ಟು ಕಾಪಾಡುವವರನ್ನು ಬಂಧಿಸಬೇಕು. 3) ಬಂದರಿನಲ್ಲಿ ಇನ್ನುಮುಂದೆ ಯಾವುದೇ ರೀತಿಯ ಕಳ್ಳತನ ಆದರೆ ಅವರ ವಿರುದ್ಧ ಪಿಟಿ ಕೇಸ್ ಹಾಕದೆ ಪ್ರಕರಣವನ್ನಷ್ಟೇ ದಾಖಲಿಸಬೇಕು. 4) ಬಂದರಿನ ಒಳಗೆ ಯಾವುದೇ ಸಮಸ್ಯೆಯಾದರೂ ಈ ಮೊದಲಿನಂತೆ ಮೀನುಗಾರರ ಸಮದ ನೇತೃತ್ವದಲ್ಲಿಯೇ ಬಗೆಹರಿಸಿಕೊಳ್ಳಲು ಅವಕಾಶ ನೀಡಬೇಕು. ಸಂದ ಅನುಮತಿ ಇಲ್ಲದೆ ಪೊಲೀಸ್ ಇಲಾಖೆ ಬಂದರಿನ ಒಳಗಿನ ಸಮಸ್ಯೆಗೆ ಮಧ್ಯ ಬರಬಾರದು. 5) ಪ್ರಕರಣಕ್ಕೆ ಮೂಲ ಕಾರಣರಾದ ಹೆಡ್ ಕಾನ್ಸ್ಟೇಬಲ್ ಲೊಕೇಶ, ಕಾನ್ಸ್ಟೇಬಲ್ ಲಕ್ಷ$್ಮಣ ಅವರನ್ನು ಕೂಡಲೇ ಅಮಾನತು ಮಾಡಬೇಕು.
ಎಲ್ಲ ಮೀನುಗಾರರ ಋಣ ನನ್ನ ಮೇಲಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಿಮ್ಮ ಋಣ ತೀರಿಸುವ ಕೆಲಸ ಖಂಡಿತ ಮಾಡುತ್ತೇನೆ. ಮೀನುಗಾರರು, ಮೀನುಗಾರಿಕೆ ಇಲ್ಲದೆ ಯಾವುದೇ ಉದ್ಯಮ ಬೆಳೆಯಲು ಸಾಧ್ಯವಿಲ್ಲ. ಮೀನುಗಾರರಿಗೆ ಆಗಿರುವ ಅನ್ಯಾಯ ಖಂಡಿಸಿ ಇಂದು ಪ್ರತಿಭಟನೆ ನಡೆದಿದೆ. ಪೊಲೀಸರು ಬಂಧಿಸಿರುವ ಅಮಾಯಕ ಮೀನುಗಾರರನ್ನು ಗೌರವಯುತವಾಗಿ ಬಿಡುಗಡೆ ಮಾಡಬೇಕು. ಇಷ್ಟೆಲ್ಲ ಘಟನೆ ನಡೆಯಲು ಮೀನುಗಾರಿಕಾ ಇಲಾಖೆಯೇ ಕಾರಣವಾಗಿದ್ದು, ಇಲ್ಲಿನ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು. | ಯಶ್ಪಾಲ್ ಸುವರ್ಣ. ಶಾಸಕ ಮೀನುಗಾರರ ಸಹನೆಯನ್ನು ಪರೀಕ್ಷಿಸಬೇಡಿ. ಮೀನು ಕದ್ದ ಮಹಿಳೆಯನ್ನು ತೋರಿಸಿದ ದಲಿತ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದಾರೆ. ಅವರ ಪತಿ ಠಾಣೆಯಲ್ಲಿ ಅಳುತ್ತ ತನಗೆ ನ್ಯಾಯ ಕೊಡಿ ಎಂದು ಅಂಗಲಾಚಿದರೂ ದೂರು ಸ್ವೀಕರಿಸಿಲ್ಲ ಯಾಕೆ? ನಮ್ಮ ಶಕ್ತಿಯನ್ನು ಕಡೆಗಣಿಸಬೇಡಿ. ನಮ್ಮ ಅಧ್ಯಕ್ಷರು ಒಮ್ಮೆ ನನಗೆ ಬೇಸರವಾಗಿದೆ ಎಂದು ಹೇಳಲಿ. ನಮ್ಮ ತಾಕತ್ತು ಏನೆಂದು ತೋರಿಸುತ್ತೇವೆ. ಎಸ್ಪಿಯವರು 10 ಸಾವಿರ ಮೀನುಗಾರರು ಬಂದರು ನಾವು ತಡೆಯುತ್ತೇವೆ ಎನ್ನುತ್ತಾರೆ. ನಿಜವಾಗಿಯೂ ನಿಮಗೆ ಮೀನುಗಾರರ ಶಕ್ತಿಯನ್ನು ತಡೆಯಲು ಸಾಧ್ಯವೇ? ಕೈಯೆತ್ತಿ ಕೊಟ್ಟವರು ಮೀನುಗಾರರು, ಈ ದೇಶದ ರಕ್ಷಕರು ಮೀನುಗಾರರು ಎನ್ನುವುದು ನೆನಪಿರಲಿ. | ಯೋಗೀಶ ಸಾಲಿಯಾನ. ಮೀನುಗಾರ ಮುಖಂಡ ಮಾಜಿ ಸಚಿವ ಮಧ್ವರಾಜ ವಿರುದ್ಧ ಪ್ರಕರಣ ದಾಖಲು ಹಲ್ಲೆಗೆ ಸಮರ್ಥನೆ, ಪ್ರಚೋದನಕಾರಿ ಭಾಷಣ ಆರೋಪ ಅಪರಾಧ ಮಾಡಿಸಲು ಪ್ರೇರಣೆ ಕಾರಣದಿಂದ ದೂರುಉಡುಪಿ: ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಮರ್ಥನೆ, ಪ್ರಚೋದನಕಾರಿ ಭಾಷಣ ಹಾಗೂ ಅಪರಾಧ ಮಾಡಿಸಲು ಪ್ರೇರಣೆ ನೀಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಪ್ರಮೋದ ಮಧ್ವರಾಜ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಪ್ರಮೋದಹಲವಾರು ಗಣ್ಯರು ಭಾಗವಹಿಸಿದ್ದ ಸಭೆಯಲ್ಲಿ ಮಾತನಾಡಿದ ಪ್ರಮೋದ ಮಧ್ವರಾಜ ಅವರು, ನಮ್ಮ ಮನೆಗೆ ಕಳ್ಳರು ಬಂದರೆ ನಾವೇನು ಮಾಡುತ್ತೇವೆ? ಪೊಲೀಸರು ಬರಲು 5-6 ಗಂಟೆ ತಡವಾದರೆ ಏನು ಮಾಡುತ್ತೇವೆ? ಕಟ್ಟಿ ಹಾಕುತ್ತೇವೆ. ಕಳ್ಳರನ್ನು ಕಟ್ಟಿ ಹಾಕಲೇಬೇಕು. ಮತ್ತೇನು ಮಾಡಲು ಸಾಧ್ಯ? ಅವರಿಗೆ ಏಟು ಎಂದರೆ ಮಚ್ಚಿನಲ್ಲಿ, ಖಡ್ಗದಲ್ಲಿ, ತಲವಾರದಲ್ಲಿ ಹೊಡೆದದ್ದಾ? ಕೆನ್ನೆಗೆ 2 ಬಾರಿಸಿದ್ದು. ಯಾರಿಗೆ? ಕಳ್ಳಿ ಅಂತ ಆರೋಪಿತ ಮಹಿಳೆಗೆ. ಆ ಮಹಿಳೆಯದು ಏನಾದರೂ ಆಕ್ಷೇಪ ಉಂಟಾ?' ಎಂದು ಮಹಿಳೆಯನ್ನು ಸಾರ್ವಜನಿಕವಾಗಿ ಕಟ್ಟಿಹಾಕಿ ಹೊಡೆದುದ್ದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದು ಸಾರ್ವಜನಿಕರಿಂದ ಅಪರಾಧ ಮಾಡಿಸಲು ಪ್ರೇರಣೆ ಮಾಡುತ್ತದೆ. ದ್ವೇಷ ಭಾವನೆಯಿಂದ ಇಷ್ಟಪೂರ್ವಕವಾಗಿ ಭಾಷಣ ಮಾಡಿದರೆ ದೊಂಬಿಯ ಅಪರಾಧ ನಡೆಯುವ ಸಂಭವ ಇದೆ ಎಂದು ಗೊತ್ತಿದ್ದರೂ ಅಲ್ಲಿದ್ದವರನ್ನು ಪ್ರಚೋದಿಸುತ್ತ ಉದ್ರೇಕದ ಭಾಷಣ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಡಾ. ಅರುಣ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.