30ರಂದು ರೈತ ಸಂಘಟನೆಗಳಿಂದ ಬೃಹತ್ ಹೋರಾಟ

Massive protest by farmer organizations on 30th
ವಿಜಯಪುರದ ಗಗನ ಮಹಲ್‌ನಲ್ಲಿ ರೈತ ಸಂಘಟನೆಗಳ ಮುಖಂಡರು ಸಭೆ ನಡೆಸಿದರು. ಅರವಿಂದ ಕುಲಕರ್ಣಿ, ವಿಜಯ ಪೂಜಾರಿ, ಪಾಂಡು ಹ್ಯಾಟಿ ಮತ್ತಿತರರಿದ್ದಾರೆ.
Published on

ವಿಜಯಪುರ : ಆಲಮಟ್ಟಿ ಅಣೆಕಟ್ಟೆಯ ಗೇಟ್ 524.256 ಮೀಟರ್‌ಗೆ ಎತ್ತರಿಸುವ ಮೂಲಕ ಕೃಷ್ಣಾ ನೀರಿನ ಬಳಕೆಗೆ ಕ್ರಮ ವಹಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಜೂ. 30 ರಂದು ರೈತ ಸಂಘಟನೆಗಳು ಬೃಹತ್ ಹೋರಾಟ ನಡೆಸಲು ನಿರ್ಧರಿಸಲಾಯಿತು.

ನಗರದ ಗಗನಮಹಲ್‌ನಲ್ಲಿ ಸೋಮವಾರ ಸಾಮೂಹಿಕ ನಾಯಕತ್ವದಲ್ಲಿ ಸಭೆ ನಡೆಸಿದ ರೈತ ಸಂಘಟನೆಗಳ ಮುಖಂಡರು ಈ ನಿರ್ಧಾರ ಪ್ರಕಟಿಸಿದರು. ಅಲ್ಲದೆ, ಆಲಮಟ್ಟಿ ಡ್ಯಾಂ ಎತ್ತರದ ಕುರಿತು ಮಹಾರಾಷ್ಟ್ರದವರು ಕ್ಯಾತೆ ತೆಗೆದಿರುವುದನ್ನು ಖಂಡಿಸಲಾಯಿತು.

ರಾಜ್ಯ ಸರ್ಕಾರ ಮಹಾರಾಷ್ಟ್ರದ ಒತ್ತಡಕ್ಕೆ ಮಣಿಯದೆ ನ್ಯಾಯಾಧಿಕರಣದ ತೀರ್ಪಿನಂತೆ ಗೇಟ್ ಅಳವಡಿಸಲು ಕ್ರಮ ವಹಿಸಬೇಕು. ತೀರ್ಪಿನ ಕುರಿತು ತಕ್ಷಣ ವಿಜಯಪುರದಲ್ಲಿ ರೈತ ಸಂಘಟನೆಗಳ ಪ್ರಮುಖರು ಆಲಮಟ್ಟಿ ಜಲಾಶಯ ಎತ್ತರಿಸುವ ಕುರಿತು ಸಭೆ ನಡೆಸಬೇಕು. ಅಂತಿಮ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರಕಾರದ ಗಮನ ಸೆಳೆಯಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ವಿಜಯ ಪೂಜಾರಿ ಮಾತನಾಡಿದರು. ಮುಖಂಡರಾದ ಪಾಂಡು ಹ್ಯಾಟಿ, ಶಾರದಾ, ಗುರುಲಿಂಗಪ್ಪ ಪಡಸಲಗಿ, ವಿಠಲ ಬಿರಾದಾರ, ಸುಜಾತಾ ಬಂಡಿವಡ್ಡರ, ಶಂಕರಗೌಡ ಹಿರೇಗೌಡರ, ಉಮೇಶ ವಾಲಿಕಾರ, ರಾಜೇಂದ್ರ ದೇಸಾಯಿ, ಮಡಿವಾಳಪ್ಪ ಕಲಗುರ್ಕಿ, ಶ್ರೀನಿವಾಸ ಗೊಟಗುಣಕಿ, ರಾಮನಗೌಡ ಹಾದಿಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net