

ವಿಜಯಪುರ: ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಹಂಚಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಿರುವುದು ಮತ್ತು ಸದನದಿಂದ 18 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ಮೆರವಣಿಗೆ ನಡೆಯಿತು. ಬಳಿಕ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿ ಘೋಷಣೆ ಮೊಳಗಿಸಲಾಯಿತು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಸರ್ಕಾರಿ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಿರುವುದು ಅಸಂವಿಧಾನಿಕ ನಡೆಯಾಗಿದೆ. ರಾಜ್ಯ ಸರ್ಕಾರ ಜಾತಿ-ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಅರುಣ ಶಹಾಪುರ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕಋ ರಚಿಸಿರುವ ಸಂವಿಧಾನದ ಶೆಡ್ಯೂಲ್‌ನಲ್ಲಿ ಇಲ್ಲದ ಜನರಿಗೆ ಮೀಸಲಾತಿ ಕಲ್ಪಸುವ ಮೂಲಕ ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಅಪಮಾನ ಮಾಡುತ್ತಿದೆ. ಮೇಲ್ನೋಟಕ್ಕೆ ಶೇ.4 ರಷ್ಟು ಕಾಮಗಾರಿ ಗುತ್ತಿಗೆಗಳಲ್ಲಿ ಮೀಸಲಾತಿ ಕೊಡುವ ಕಾನೂನು ಮಾಡಿರಬಹುದು. ಆದರೆ ದೂರಗಾಮಿ ಪರಿಣಾಮ ಮೀಸಲಾತಿ ಚರ್ಚೆಗೆ ಧಕ್ಕೆ ತರುವಂತಹ ಹುನ್ನಾರಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ ಎಂದು ಆರೋಪಿಸಿದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸ್ವಪ್ನಾ ಕಣಮುಚನಾಳ ಮಾತನಾಡಿದರು. ಮುಖಂಡರಾದ ಸಂಜೀವ ಐಹೊಳೆ, ಭೀಮಾಶಂಕರ ಹದನೂರ, ಚಿದಾನಂದ ಚಲವಾದಿ, ಉಮೇಶ ಕೋಳಕೂರ, ಅನಿಲ ಜಮಾದಾರ, ಮಹೇಂದ್ರ ನಾಯಕ, ರಾಜಕುಮಾರ ಸಗಾಯಿ, ವಿಜಯ ಕೂಡಿಗನೂರ, ಭೀಮಶಿಂಗ ರಾಠೋಡ, ಮಲ್ಲಿಕಾರ್ಜುನ ಜೋಗೂರ, ಎಸ್.ಎ. ಪಾಟೀಲ, ರವಿಕಾಂತ ಬಗಲಿ, ರಾಜು ಬಿರಾದಾರ, ಪ್ರಭುಗೌಡ ಅಸ್ಕಿ, ವಿನಾಯಕ ಗೌಳಿ, ವಿಠ್ಠಲ ಹೊಸಪೇಟ, ಸಂಪತ ಕೊವಳ್ಳಿ, ಈರನಗೌಡ ಬಿರಾದಾರ, ಅಶೋಕ ರಾಠೋಡ, ಸಿದಗೊಂಡ ಬಿರಾದಾರ, ರವಿ ಬಿರಾದಾರ, ಸುರೇಶ ಬಿರಾದಾರ, ಶೀತಲಕುಮಾರ ಓಗಿ, ಪಾಂಡು ದೊಡಮನಿ, ಕೃಷ್ಣಾ ಗುನ್ನಾಳಕರ, ವಿಜಯ ಜೋಶಿ, ಬಸವರಾಜ ಬೈಚಬಾಳ, ಪ್ರದೀಪ ಚಲವಾದಿ, ಭರತ ಕೋಳಿ, ಮಧು ಬಿರಾದಾರ, ಶರಣ ದಳವಾಯಿ, ಎಲ್.ಆರ್. ಅಂಗಡಿ ಮತ್ತಿತರರಿದ್ದರು.