

ವಿಜಯಪುರ: ಬೆಲೆ ಏರಿಕೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಜನವಿರೋಧಿ ನೀತಿ ವಿರುದ್ಧ ಮೇ 14 ರಂದು ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಯುಸಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನರೆಡ್ಡಿ ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಲೆ ಏರಿಕೆ ವಿಷಯದಲ್ಲಿ ಪರಸ್ಪರ ಪೈಪೋಟಿಗೆ ಇಳಿದಿವೆ. ಒಬ್ಬರನ್ನು ಕೇಳಿದರೆ ಇನ್ನೊಬ್ಬರತ್ತ ಆರೋಪ ಹೊರಿಸುತ್ತಲೇ ಜನರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಸಾವಿರಾರು ಜನ ಭಾಗವಹಿಸಲಿದ್ದಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರ ಬದುಕನ್ನು ದುರ್ಬಲಗೊಳಿಸಿದೆ, ಆರೋಗ್ಯ ವಲಯ ಸಹ ಹದಗೆಟ್ಟಿದೆ, ಸರ್ಕಾರಿ ಆಸ್ಪತ್ರೆಯಲ್ಲೂ ಕೆಲವು ಟೆಸ್ಟ್‌ಗಳನ್ನು ಖಾಸಗಿ ಪ್ರಯೋಗಾಲಯಕ್ಕೆ ಹೋಗಿ ಮಾಡಿಕೊಳ್ಳಲು ಬಡ ಜನತೆ ದುಬಾರಿ ಹಣ ತೆರುವಂತಾಗಿದೆ, ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಎಲ್ಲ ತೆರನಾದ ಪರೀಕ್ಷೆ ನಡೆಸುವ ವ್ಯವಸ್ಥೆಯಾಗಬೇಕಿದೆ, ಈ ಬೇಡಿಕೆಯನ್ನು ಸಹ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.
ಪ್ರೀಪೇಡ್ ಕರೆನ್ಸಿ ಮಾದರಿಯಲ್ಲಿ ಸ್ಮಾರ್ಟ್ ಮೀಟರ್ ವ್ಯವಸ್ಥೆ ಅಳವಡಿಸಿ ಕರೆಂಟ್ ಶುಲ್ಕ ಆಕರಣೆ ಮಾಡುವುದು ಸರಿಯಲ್ಲ, ಈ ವ್ಯವಸ್ಥೆ ಅತ್ಯಂತ ಅಪಾಯಕಾರಿ, ರೈತರ ಉಚಿತ ವಿದ್ಯುತ್ ವ್ಯವಸ್ಥೆಯಿಂದ ವಂಚಿತವಾಗುವ ಷಡ್ಯಂತ್ರದ ಭಾಗವಾಗಿ ಈ ವ್ಯವಸ್ಥೆ ಅಳವಡಿಸಲಾಗುತ್ತಿದೆ ಎಂದು ದೂರಿದರು.
ರೈತರ ಬದುಕು ದುಸ್ತರವಾಗಿದೆ, ಡಾ.ಎಂ.ಎಸ್. ಸ್ವಾಮಿನಾಥನ್ ಅವರ ವರದಿ ಜಾರಿಗೊಳಿಸಿ ಬೆಂಬಲ ಬೆಲೆ ನೀಡುವ ಕೇಂದ್ರ ಸರ್ಕಾರದ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ ಎಂದರು.
ಅಶ್ಲೀಲ ಸಾಹಿತ್ಯ, ಸಿನೆಮಾ ಪ್ರಚಾರಗೊಳಿಸಿ, ಕೋಮುವಾದ ಜಾಗೃತಗೊಳಿಸಿ ದುಡಿಯುವ ಜನರ ಒಗ್ಗಟ್ಟು ಮುರಿಯುವ ಷಡ್ಯಂತ್ರ ನಡೆಯುತ್ತಿದೆ. ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಲಾಗುತ್ತಿದೆ. ಆದರೆ ಅನ್ನದಾತ ಇಂದು ಸಾಲಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದರು.
ಬೆಲೆ ಏರಿಕೆ ನಿಯಂತ್ರಣ, ಬಗರ್ ಹುಕುಂ ಸಾಗುವಳಿ ದಾರರಿಗೆ ಹಕ್ಕು ಪತ್ರ ವಿತರಣೆ, ರೈತರಿಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎಚ್.ಟಿ. ಮಲ್ಲಿಕಾರ್ಜುನ, ಸಿದ್ದಲಿಂಗ ಬಾಗೇವಾಡಿ, ಶ್ರೀಕಾಂತ ಕೊಂಡಗೂಳಿ ಮತ್ತಿತರರಿದ್ದರು. ಪ್ರತಿಭಟನೆಯ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.