

ಮದ್ದೂರು: ಶರಣರ ಸಂಘಟನಾ ವೇದಿಕೆ (ಮದ್ದೂರು ಘಟಕ) ಹಾಗೂ ಉದ್ಯೋಗ ವಿನಿಮಯ ಕಚೇರಿ ಮಂಡ್ಯ ಅವರ ವತಿಯಿಂದ ಅ.13 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶರಣರ ಸಂಘಟನಾ ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎಂ.ಗಂಗಾಧರ್ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಗರದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಕೆ.ಬೆಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಟರಾಜ್, ರೈತ ಮುಖಂಡ ಅಣ್ಣೂರು ಮಹೇಂದ್ರ, ಮುಖಂಡ ನೈದಿಲೆ ಚಂದ್ರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ನೀಡುವುದಕ್ಕಾಗಿ ರಾಜ್ಯದ 30ಕ್ಕೂ ಹೆಚ್ಚಿನ ಪ್ರತಿಷ್ಟಿತ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ. ಡಿಪ್ಲೋಮಾ, ಐಟಿಐ, ಸ್ನಾತಕೋತ್ತರ, ಎಂಬಿಎ, ಎಂಜಿನಿಯರಿಂಗ್, ಇನ್ನಿತರ ಪದವೀಧರ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದು. ಐಟಿ, ಬಿಟಿ, ಆಟೋಮೊಬೈಲ್, ಫಾರ್ಮಸಿ, ಇನ್ಸೂರೆನ್ಸ್, ಬ್ಯಾಂಕಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್, ಎಲೆಕ್ಟ್ರಿಕಲ್ಸ್, ಫಿಟ್ಟರ್, ನರ್ಸಿಂಗ್ ಸೇರಿದಂತೆ ಹಲವಾರು ಕ್ಷೇತ್ರಗಳ ಉದ್ಯೋಗಾವಕಾಶಗಳಿಗೆ ಮೇಳದಲ್ಲಿ ಆಯ್ಕೆ ನಡೆಯಲಿದ್ದು, ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ವೈಯುಕ್ತಿಕ ವಿವರ ತರತಕ್ಕದ್ದು. ಅಭ್ಯರ್ಥಿಗಳು ಬಯಸಿದ ಕಂಪನಿಗೆ ಸಂದರ್ಶನ ನೀಡಲು ಅವಕಾಶವಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅದೇ ದಿನ ಕಂಪನಿಗಳು ನೇಮಕಾತಿ ಪತ್ರ ನೀಡಲಿವೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ, ಪದವಿಪೂರ್ವ ಕಾಲೇಜಿನ ಮತ್ತು ಪದವಿ ಕಾಲೇಜಿನ ಅಭ್ಯರ್ಥಿಗಳು ಭಾಗವಹಿಸಬಹುದು. ಅಲ್ಲದೆ ಸಂಘ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಪ್ರಚಾರ ನೀಡಿ, ಉದ್ಯೋಗಾಕಾಂಕ್ಷಿಗಳಿಗೆ ಸಂದರ್ಶನಕ್ಕೆ ಬರುವಂತೆ ಮಾಡಬಹುದು ಎಂದು ಗಂಗಾಧರ್ ತಿಳಿಸಿದರು.
ಜಿಲ್ಲಾಧ್ಯಕ್ಷ ನಂದೀಶ್, ತಾಲೂಕು ಉಪಾಧ್ಯಕ್ಷ ಭೀಮನಕೆರೆ ಬಸವರಾಜ್, ನಗರ ಘಟಕ ಅಧ್ಯಕ್ಷ ಪರಮೇಶ್, ನಗರ ಮಹಿಳಾ ಘಟಕ ಅಧ್ಯಕ್ಷೆ ರಶ್ಮಿ ಗಿರೀಶ್, ಜಯ ಕರ್ನಾಟಕ ತಾ.ಅಧ್ಯಕ್ಷ ಹೆಚ್.ಎಸ್.ನಾಗೇಶ್, ಸಂಚಾಲಕ ಗಿರೀಶ್, ಕಲ್ಲೇಶ್ ಕುಮಾರ್ ಹಾಗೂ ಪದಾಧಿಕಾರಿಗಳು ಇದ್ದರು.