

ಮಂಡ್ಯ: ಎರಡು ದಿನ ಮಂಡ್ಯ ಟೂ ಇಂಡಿಯಾ ಬೃಹತ್ ಉದ್ಯೋಗ ಮೇಳದಲ್ಲಿ 6,150 ಅರ್ಜಿ ಬಂದಿದ್ದವು. ಈ ಪೈಕಿ 1,122 ಅಭ್ಯರ್ಥಿಗಳಿಗೆ ನೇರ ನೇಮಕಾತಿ ಪತ್ರ ನೀಡಲಾಗಿದೆ ಇಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಆಯ್ಕೆಯಾಗದ ಅಭ್ಯರ್ಥಿಗಳಿಗೆ ಡಿಸೆಂಬರ್ ತಿಂಗಳೊಳಗಾಗಿ ಉದ್ಯೋಗ ಕೊಡಿಸಲಾಗುವುದು. ಅದಕ್ಕಾಗಿ ಮಂಡ್ಯದ ತಮ್ಮ ಕಚೇರಿಯಲ್ಲಿ ಸುಸಜ್ಜಿತ ವಾರ್ ರೂಂ ಹಾಗೂ ದೆಹಲಿಯ ನನ್ನ ಸಚಿವಾಲಯದಲ್ಲಿ ವಿಶೇಷ ಸೆಲ್ ತೆರೆಯಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮೇಳ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಆಗಿದೆ. ನನಗೆ ಬಹಳ ಸಂತೋಷವಾಗಿದ್ದು, ನನ್ನ ಕ್ಷೇತ್ರದ, ರಾಜ್ಯದ ವಿವಿಧ ಜಿಲ್ಲೆಗಳ ರೈತಾಪಿ ಜನರ ಮಕ್ಕಳಿಗೆ ಉದ್ಯೋಗ ಸಿಕ್ಕಿದೆ ಎನ್ನುವ ಆತ್ಮತೃಪ್ತಿ ದೊರೆತಿದೆ. ಉದ್ಯೋಗ ಮಕ್ಕಳಿಗೆ, ಆ ಸಂತೋಷ ಅವರ ಪಾಲಕರಿಗೆ ಆಗಿದೆ. ಇಂತಹ ಒಳ್ಳೆಯ ಕೆಲಸ ಮಾಡಿದ್ದೇನೆ ಎನ್ನುವ ಸಾರ್ಥಕ ಭಾವನೆ ನನ್ನದು. ಈ ಮೇಳದ ಯಶಸ್ಸು ನನಗೆ ಇನ್ನಷ್ಟು ಉತ್ತೇಜನ ನೀಡಿದೆ. ಜಿಲ್ಲೆಯ ಯಾವ ಮಕ್ಕಳು ಉದ್ಯೋಗಕ್ಕಾಗಿ ಅಲೆಯುವಂತ ಪರಿಸ್ಥಿತಿ ಬರಬಾರದು. ಇದು ಆರಂಭ, ಮುಕ್ತಾಯ ಅಲ್ಲ. ಮೇಳ ಇನ್ನು ಮುಂದೆ ನಿರಂತರವಾಗಿ ನಡೆಯುತ್ತವೆ. ಉದ್ಯೋಗ ಸಿಗದವರು ಬೇಸರ ಮಾಡಿಕೊಳ್ಳುವುದು ಬೇಡ. ಉಳಿದ ಅರ್ಜಿಯನ್ನು ಫಾಲೋ ಅಪ್ ಮಾಡುತ್ತೇವೆ. ಅವರೆಲ್ಲರಿಗೂ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮೇಳ ಯಶಸ್ವಿಯಾಗಲು ಬಹಳ ಜನರು ಕಾರಣರಾಗಿದ್ದಾರೆ. ವಿಶೇಷವಾಗಿ ಎನ್‌ಸಿಸಿ ಮಕ್ಕಳಿಗೆ ಧನ್ಯವಾದ ಅರ್ಪಿಸುತ್ತೇನೆ. ಪೊಲೀಸರು ನಮ್ಮ ರೈತಾಪಿ ಮಕ್ಕಳಿಗೆ ಕೆಲಸ ಸಿಗಲಿ ಎನ್ನುವ ಪ್ರೀತಿಯಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಜಿಲ್ಲಾಡಳಿತದ ಸಹಕಾರಕ್ಕೆ ನಾನು ಆಭಾರಿ ಆಗಿದ್ದೇನೆ. ಜಿಲ್ಲಾಧಿಕಾರಿ, ಎಸ್‌ಪಿ, ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಅವರೆಲ್ಲ ತಂಡಗಳ ಅಧಿಕಾರಿಗಳು ನಮದೇ ಕಾರ್ಯಕ್ರಮ ಎಂದು ನಡೆಸಿಕೊಟ್ಟಿದ್ದಾರೆ. ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಆಕರ್ಷಕ ಪ್ಯಾಕೇಜ್: ಅನೇಕ ಯುವ ಜನರಿಗೆ ಒಳ್ಳೆಯ ಕಂಪನಿಗಳಿಂದ ಆಕರ್ಷಕ ವೇತನದ ಪ್ಯಾಕೇಜ್ ಸಿಕ್ಕಿದೆ. ಒಬ್ಬರಿಗೆ ಹುಂಡೈ ಕಂಪನಿಯಿಂದ ವರ್ಷಕ್ಕೆ 8 ಲಕ್ಷ ರೂಪಾಯಿ, ಮರ್ಸಿಡಿಸ್ ಬೆಂಜ್ ಕಂಪನಿಯಿಂದ ಇನ್ನೂ ಹಲವರಿಗೆ ವಾರ್ಷಿಕ 6 ಲಕ್ಷ ರೂಪಾಯಿ ಪ್ಯಾಕೇಜ್ ಸಿಕ್ಕಿದೆ. ಸಾಕಷ್ಟು ಮಾಹಿತಿ ನನಗೆ ಇನ್ನು ಬರಬೇಕಿದೆ ಎಂದ ಅವರು, ಉದ್ಯೋಗ ಸಿಕ್ಕಿರುವ ಅಭ್ಯರ್ಥಿಗಳು ಎಲ್ಲಿಯೇ ಅವಕಾಶ ಸಿಕ್ಕಿದರೂ ಹೋಗಿ. ದೇಶ ಸುತ್ತಿ, ಕೋಶ ಓದಿ ಎನ್ನುವ ಮಾತಿದೆ. ಹೊರಗೆ ಹೋದರೆ ಪ್ರಪಂಚ ಗೊತ್ತಾಗುತ್ತದೆ. ಯಾವುದೇ ರಾಜ್ಯದಲ್ಲಿ ಉದ್ಯೋಗ ಸಿಕ್ಕಿದರೂ ಹೋಗಿ ಸೇರಿಕೊಳ್ಳಿ. ಕರ್ನಾಟಕದಲ್ಲಿಯೇ ಉದ್ಯೋಗ ಸಿಗಬೇಕು ಎಂದುಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಇದು ಠಕ್ಕರ್ ಕೊಡುವುದಕ್ಕಲ್ಲ, ನನ್ನ ಜವಾಬ್ದಾರಿ ನಿರ್ವಹಣೆ ಮಾಡಿದ್ದೇನೆ. ಇನ್ನೊಬ್ಬರ ಮೆಚ್ಚಿಸಲು ನಾನು ಮಾಡಲ್ಲ, ಜನ ನಂಬಿ ಮತ ಕೊಟ್ಟಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಆದ್ದರಿಂದ ಇನ್ನೊಬ್ಬರ ಸರ್ಟಿಫಿಕೇಟ್‌ಗೆ ನಾನು ಕೆಲಸ ಮಾಡುವವನಲ್ಲ. ಆದ್ದರಿಂದ ನನ್ನ ಬಗ್ಗೆ ಸಣ್ಣದಾಗಿ ಮಾತನಾಡುವವರಿಗೆ ಇದೆ ತಕ್ಕ ಉತ್ತರ. 2018 ಸಿಎಂ ಆಗಿದ್ದಾಗ 50 ಸಾವಿರ ಉದ್ಯೋಗ ಸೃಷ್ಟಿಸಲು ಡಿಸ್ನಿಲ್ಯಾಂಡ್ ಯೋಜನೆ ಮಾಡಲಾಗಿತ್ತು. ಆದರೆ ಕಾವೇರಿ ಪ್ರತಿಮೆ ಎಂದು ಅದು ಅಲ್ಲಿಗೆ ನಿಂತು ಹೋಯಿತು. ರಾಜ್ಯಸರ್ಕಾರ ಏನು ಮಾಡುತ್ತಾರೆ ನೋಡೋಣ. ರೈತ ವಿರೋಧಿ ನೀತಿ ಅನುಸರಿಸಿ ಯಾವುದೇ ಕಾರ್ಯಕ್ರಮ ಆಗಬಾರದು. ನಮ್ಮ ರೈತರ ಹೊಲಕ್ಕೆ ನೀರು ಬಿಡಬೇಕು. ಆದ್ದರಿಂದ ರೈತರ ಜತೆ ಮಾತನಾಡಿ ಅನುಮಾನ ಸರಿಪಡಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಾವೆಲ್ಲ ವಿಜೃಂಭಣೆಯಿಂದ ದಸರಾ ಆಚರಣೆ ಮಾಡುತ್ತಿದ್ದರೆ, ಕಲಬುರಗಿಯ ಕುಟುಂಬ ಯಲಹಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದೆ. ನಾಲ್ಕು ಜನ ಮರಣ ಹೊಂದಿದ್ದಾರೆ. ಇದನ್ನ ನೋಡಿದಾಗ ಯಾವ ಪುರುಷಾರ್ಥಕ್ಕೆ ರಾಜಕಾರಣ ಮಾಡಬೇಕು ಎನಿಸುತ್ತದೆ. ಇಂತಹ ವಿಚಾರಗಳನ್ನ ನಾವು ಯೋಚನೆ ಮಾಡಬೇಕು. ನಾನು ರಾಜ್ಯದ ಜನರಿಗೆ ಮನವಿ ಮಾಡುತ್ತೇನೆ. ಯಾರೂ ಇಂತಹ ಕೆಲಸ ಮಾಡಬೇಡಿ, ಧೈರ್ಯವಾಗಿ ಎಲ್ಲವನ್ನೂ ಎದುರಿಸಿ ಎಂದು ಹೇಳಿದರು.
ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಬಂಡೆಪ್ಪ ಕಾಂಶಪೂರ್, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಜಿಪಂ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್ ಇತರರಿದ್ದರು.
ಪಾಲಕರನ್ನು ಕಳೆದುಕೊಂಡ ಯುವತಿಗೆ ಉದ್ಯೋಗ
ಕಾರವಾರದ ಶಿರೂರಿನ ಗುಡ್ಡ ಕುಸಿತ ಪ್ರಕರಣದಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡ ಯುವತಿಗೆ ಮೇಳದಲ್ಲಿ ಉದ್ಯೋಗ ಸಿಕ್ಕಿದೆ. ಕೃತಿಕಾ ಅವರು ಬಿಎಚ್‌ಇಎಲ್‌ನಲ್ಲಿ ಉದ್ಯೋಗ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದಲ್ಲದೆ ಖಾಸಗಿ ರಂಗದ ಪ್ರತಿಷ್ಠಿತ ಟಾಟಾ ಮೋಟಾರ್ಸ್ ಕಂಪನಿಯಲ್ಲಿ ಅವಳಿ ಸಹೋದರಿಯಾದ ನವ್ಯಾ ಮತ್ತು ನಂದಿತಾ ಉದ್ಯೋಗ ಪಡೆದುಕೊಂಡರು. ಇನ್ನು ಅಲೋರಿಕಾ ಗ್ಲೋಬಲ್ ಬಿಪಿಒ ಕಂಪನಿಯಲ್ಲಿ ಉದ್ಯೋಗ ಪಡೆಯುವಲ್ಲಿ ಅಂಧ ಯುವಕ ಅಜಯ್‌ಕುಮಾರ್ ಯಶಸ್ವಿಯಾದರು. ಸಚಿವ ಎಚ್.ಡಿ.ಕುಮಾರಸ್ವಾಮಿ ನೇಮಕಾತಿ ಪತ್ರ ವಿತರಿಸಿ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸಿದರು.
ಮೊದಲ ಬಾರಿ ಸಿಎಂ ಆದಾಗಾ ಜನತಾದರ್ಶನ ಮಾಡಿದೆ. ಬೆಳಗ್ಗೆಯಿಂದ ರಾತ್ರಿ ವರೆಗೂ ಜನರ ಸಮಸ್ಯೆ ಆಲಿಸುತ್ತಿದ್ದೆ. ನಮ್ಮ ಮಂಡ್ಯದ 400 ಕುಟುಂಬ ಅಮೆರಿಕಾದಲ್ಲಿ ಬದುಕುತ್ತಿವೆ. ನೀವು ಬೆಂಗಳೂರು, ಹೈದರಾಬಾದ್‌ನಲ್ಲಿ ಕೆಲಸ ಮಾಡಲು ಆತಂಕ ಏಕೆ. ಕಷ್ಟಪಟ್ಟು ಕೆಲಸ ಮಾಡಿದರೆ ಆರ್ಥಿಕವಾಗಿ ಬೆಳೆಯಬಹುದು. 50 ಸಾವಿರ ರೂನಿಂದ 1 ಲಕ್ಷ ರೂವರೆಗೂ ಸಂಬಳ ಪಡೆಯಬಹುದು. ಹಿಂದೆ ನಮಗೂ ಕರ್ನಾಟಕ ಬಿಟ್ಟು ಹೋಗಲು ಆಗುತ್ತಿರಲಿಲ್ಲ. ಈಗ ದೆಹಲಿಗೆ ಹೋಗಿ ಕೆಲಸ ಮಾಡುತ್ತಿದ್ದೇವೆ.ಎಚ್.ಡಿ.ಕುಮಾರಸ್ವಾಮಿಕೇಂದ್ರ ಸಚಿವ