

ಮಂಡ್ಯ: ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಬಗೆಹರಿಸುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಈ ನಿಟ್ಟಿನಲ್ಲಿ ಆಟೋ ಮೊಬೈಲ್ ಮತ್ತು ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ‘ಮಂಡ್ಯ ಟು ಇಂಡಿಯಾ’ ಘೋಷವಾಕ್ಯದೊಂದಿಗೆ ಆಯೋಜಿಸಿರುವ ಎರಡು ದಿನದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆಟೋ ಮೊಬೈಲ್ ಮತ್ತು ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆ ಹಾಗೂ ಬಿಡಿ ಭಾಗಗಳ ತಯಾರಿಕೆಗೆ ವಿಫುಲ ಅವಕಾಶ ಕಲ್ಪಿಸಲು ಪೂರಕ ಯೋಜನೆ ಅನುಷ್ಠಾನಗೊಳಿಸಿದೆ. ಇದು ಪ್ರಧಾನ ಮಂತ್ರಿ ಮೋದಿ ಅವರ ಬದ್ಧತೆಯ ಕಾರ್ಯವಾಗಿದ್ದು, ಇದರಿಂದ ಯುವ ಜನರಿಗೆ ವಿಫಲ ಉದ್ಯೋಗಾವಕಾಶ ದೊರೆಯಲಿದೆ ಎಂದರು.
ಲೋಕಸಭಾ ಚುನಾವಣೆ ಸಮಯದಲ್ಲಿ ಮಂಡ್ಯ ಜಿಲ್ಲೆ ಸೇರಿದಂತೆ ನೆರೆ ಜಿಲ್ಲೆಗಳ ಉದ್ಯೋಗಾಕಾಂಕ್ಷಿತರ ಅಳಲು ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ದೇಶದ ಪ್ರತಿಷ್ಠಿತ ಕಂಪನಿಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಕನಿಷ್ಟ ಒಂದೂವರೆ ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸುವ ಚಿಂತನೆ ನನ್ನದಾಗಿದೆ. ಯುವ ಜನಾಂಗಕ್ಕೆ ಪೂರಕ ಉದ್ಯೋಗ ದೊರಕಿಸಲು ನೌಕಾದಳ ಹಾಗೂ ಭೂ ಸೇನಾ ನೇಮಕಾತಿಗಳ ಬಗ್ಗೆ ಮಾಹಿತಿ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಡ್ಯ ಜನರ ನಿರೀಕ್ಷೆ ಅಪಾರವಾಗಿದ್ದು, ಹಂತ ಹಂತವಾಗಿ ಹಲವು ಕೈಗಾರಿಕೆಗಳನ್ನು ಆರಂಭಿಸುವ ಉತ್ಸುಕತೆ ಇದೆ. ಬಿಎಚ್‌ಇಎಲ್ ವಿಸ್ತರಣೆ, ಎಚ್‌ಎಂಟಿ ಕಾರ್ಖಾನೆ, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಉತ್ಪಾದನಾ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಕಟಿಬದ್ಧವಾಗಿರುವುದಾಗಿ ತಿಳಿಸಿದರು.
ಕೇಂದ್ರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎನ್.ಕೃಷ್ಣಯ್ಯ ಮಾತನಾಡಿ, ಎಚ್‌ಡಿಕೆ ಅವರ ಬಹಳ ದಿನಗಳ ಬಯಕೆ ಈಡೇರಿದೆ. ಮಂಡ್ಯ ಸೇರಿದಂತೆ ನೆರೆ ಜಿಲ್ಲೆಯ ಯುವ ಜನರಿಗೆ ಉದ್ಯೋಗ ದೊರಕಿಸುವ ಮೂಲಕ ಅವರ ಪಾಲಕರ ಬದುಕಿಗೂ ಆಸರೆಯಾಗುವ ಸದುದ್ದೇಶದಿಂದ ದೆಹಲಿ ಮತ್ತು ಮುಂಬೈನಿಂದ ಹಲವು ಕೈಗಾರಿಕಾ ಕಂಪನಿಗಳ ಮುಖ್ಯಸ್ಥರನ್ನು ಮೇಳಕ್ಕೆ ಕರೆತರಲಾಗಿದೆ ಎಂದು ತಿಳಿಸಿದರು.
ವಿವಿಧ ಉದ್ದಿಮೆಗಳ ಪ್ರತಿನಿಧಿಗಳಾದ ಕೊಹ್ಲಿ, ಕುಪ್ಪು ಸದಾಶಿವ ಮೂರ್ತಿ, ಸುರೇಂದ್ರನಾಥ್, ರವಿಕುಮಾರ್, ಶರ್ಮಾ, ಸಂಜಯ್ ಬಂಗೇರಾ, ಅಮಿತ್ ಮುಖರ್ಜಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಶಾಸಕ ಎಚ್.ಟಿ.ಮಂಜು, ಎಂಎಲ್‌ಸಿ ವಿವೇಕಾನಂದ, ಜಿಪಂ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮುಖಂಡ ಅಮರಾವತಿ ಚಂದ್ರಶೇಖರ್ ಇತರರಿದ್ದರು.
ಸಾಯಿ ಎಕ್ಸ್‌ಪೋರ್ಟ್‌ನಿಂದ ಉದ್ಯೋಗ
ಮದ್ದೂರಿನ ಗೆಜ್ಜಲಗೆರೆ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಸಾಯಿ ಎಕ್ಸ್‌ರ್ಪೋರ್ಟ್ ಕಂಪನಿಯೂ ಐದಾರು ಸಾವಿರ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದೆ. ಇದಲ್ಲದೆ ಹೆಚ್ಚುವರಿಯಾಗಿ 150 ಎಕರೆ ಜಮೀನು ನೀಡಿದರೆ, 10 ಸಾವಿರ ಮಹಿಳೆಯರಿಗೆ ಗಾರ್ಮೆಂಟ್ಸ್ ಉದ್ಯಮದಲ್ಲಿ ಉದ್ಯೋಗ ದೊರಕಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಳವಳ್ಳಿ, ಶ್ರೀರಂಗಪಟ್ಟಣ ಅಥವಾ ಬೆಳ್ಳೂರಿನಲ್ಲಿ ಜಮೀನು ಲಭ್ಯತೆ ಆಧಾರದಲ್ಲಿ ಅವಕಾಶ ಕಲ್ಪಿಸುವ ಚಿಂತನೆ ಇದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಉದ್ಯೋಗ ಅರಸಿ ಯುವ ಸಮೂಹ ಬಂದಿದೆ. ಆದರೆ ಕೆಲವರು ಮಂಡ್ಯದಲ್ಲಿಯೇ ಉದ್ಯೋಗ ಕೊಡಿಸುವಂತೆ ಬೇಡಿಕೆ ಇಡುತ್ತಿದ್ದಾರೆ. ಆದರೆ ಮಂಡ್ಯದಲ್ಲೆ ಕೆಲಸ ಸಿಗಬೇಕು ಎಂಬ ಮನಸ್ಥಿತಿ ಬಿಡಬೇಕು. ಎಲ್ಲಿ ಕೆಲಸ ಸಿಗುತ್ತದೆಯೋ, ಅಲ್ಲಿ ಹೋಗಿ ಮೊದಲು ಕೆಲಸಕ್ಕೆ ಸೇರಿಕೊಳ್ಳಿ. ಭವಿಷ್ಯದಲ್ಲಿ ಒಳ್ಳೆಯ ಅವಕಾಶ ಸಿಗಲಿದೆ ಎಂದು ಸಲಹೆ ನೀಡಿದ ಎಚ್‌ಡಿಕೆ, ಇಲ್ಲಿ ಬಂದಿರುವವರಿಗೆ ನಿರಾಸೆ ಮಾಡುವುದಿಲ್ಲ. ಹಂತ ಹಂತವಾಗಿ ಡಿಸೆಂಬರ್ ಒಳಗೆ ಉದ್ಯೋಗ ಕೊಡಿಸಲಾಗುವುದು. ಜಿಲ್ಲೆಯ ಸರ್ವತೋಮುಖ ಅಭಿವೃದ್ದಿ ಆಗುತ್ತದೆ ಎನ್ನುವ ನಂಬಿಕೆಯಿಂದ ಜನತೆ ಆಶೀರ್ವಾದ ಮಾಡಿದ್ದಾರೆ. ವಿರೋಧಿಗಳು ನನ್ನ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ನಾನು ದೇಶದ ಹಲವು ಕಡೆ ಪ್ರವಾಸ ಮಾಡುತ್ತಿದ್ದೇನೆ. ಆದರೆ ನನ್ನ ಗಮನ ಸಂಪೂರ್ಣವಾಗಿ ಮಂಡ್ಯ ಹಾಗೂ ಕರ್ನಾಟಕದ ಕಡೆ ಇದೆ ಎಂದು ತಿರುಗೇಟು ನೀಡಿದರು.
ನಿರೀಕ್ಷೆಗೂ ಮೀರಿದ ಸ್ಪಂದನೆ
‘ಮಂಡ್ಯ ಟು ಇಂಡಿಯಾ’ ಘೋಷವಾಕ್ಯದೊಂದಿಗೆ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳಕ್ಕೆ ನಿರೀಕ್ಷೆಗೂ ಮೀರಿದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. 150ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಉದ್ಯೋಗಾವಕಾಶಕ್ಕಾಗಿ ಮಂಡ್ಯ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಅಭ್ಯರ್ಥಿಗಳು ಆಗಮಿಸಿದ್ದರು. ಇವರಿಗೆ ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಡಲಾಗಿತ್ತು.
ಭಾರತೀಯ ಭೂಸೇನೆ, ವಾಯುಪಡೆ, ನೌಕಾಪಡೆ ಸೇರಿದಂತೆ ಮೇಕಾನ್, ಭಾರತೀಯ ಉಕ್ಕು ಪ್ರಾಧಿಕಾರ, ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ, ಲೈಲೋಡ್ಸ್ ಮೆಟಲ್ಸ್, ಭಾರತ್ ಹೆವಿ ಎಲೆಕ್ಟ್ರಿಕಲ್, ಜಿಂದಾಲ್ ಸ್ಟೀಲ್, ಹ್ಯುಂಡೈ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಪ್ರತಿಷ್ಠಿತ ಉದ್ಯೋಗದಾತ ಕಂಪನಿಗಳು ಭಾಗಿಯಾಗಿ ಮೊದಲ ದಿನ ಸಾವಿರಾರು ಪ್ರತಿಭಾನ್ವಿತ ಯುವಜನರನ್ನು ಆಯ್ಕೆ ಮಾಡಿಕೊಂಡಿವೆ.
ಅಭ್ಯರ್ಥಿಗಳಿಗೆ ನಮ್ಮ ಸ್ವಯಂ ಸೇವಕರು, ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಕಂಪನಿಗಳ ಅಧಿಕಾರಿಗಳು ಅಭ್ಯರ್ಥಿಗಳ ವಿವರಗಳನ್ನು ಗಮನಿಸಿದ ನಂತರ ಅವರಿಗೆ ಸೂಕ್ತವಾದ, ಅರ್ಹವಾದ ಹುದ್ದೆಯನ್ನು ನೀಡುವ ವ್ಯವಸ್ಥೆ ಮಾಡಲಿದ್ದಾರೆ. ಅನೇಕ ಯುವಜನರಿಗೆ ಈಗಾಗಲೇ ನೇರ ನೇಮಕಾತಿ ಪತ್ರ ಕೊಡಲಾಗಿದೆ. ಆ ವಿವರಗಳನ್ನು ಉದ್ಯೋಗ ಮೇಳದ ಕೊನೆಯಲ್ಲಿ ಹೇಳಲಾಗುವುದು.ಎಚ್.ಡಿ.ಕುಮಾರಸ್ವಾಮಿಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರು