

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಅವರ ಜನ್ಮದಿನದ ಪ್ರಯುಕ್ತ ‘ಬೃಹತ್ ಉದ್ಯೋಗ ಮೇಳ’ ಹಾಗೂ ‘ಬೃಹತ್ ಆರೋಗ್ಯ ಶಿಬಿರ’ವನ್ನು ಜುಲೈ 24 ರಂದು ಜೆ.ಕೆ.ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಇಂದಿರಾಗಾಂಧಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು ಮಾಹಿತಿ ನೀಡಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಕೆ.ಹರೀಶ್‌ಗೌಡ ಅವರ ಅಭಿಮಾನಿ ಬಳಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 3 ಗಂಟೆ ವೆರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶ್ರೀ ನಿರ್ಮಲಾನಂದ ಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸೋಮನಾಥ ಸ್ವಾಮೀಜಿ, ಶ್ರೀ ಶಿವಾನಂದ ಪುರಿ ಸ್ವಾಮೀಜಿ ಸೇರಿದಂತೆ ವಿವಿಧ ಧಾರ್ಮಿಕ ಗುರುಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಕೆ.ವೆಂಕಟೇಶ್, ಎನ್.ಚಲುವರಾಯಸ್ವಾಮಿ, ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಬೃಹತ್ ಉದ್ಯೋಗ ಮೇಳದಲ್ಲಿ 100 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು, ಕಾರ್ಖಾನೆಗಳು, ಉದ್ಯಮಗಳು, ಕೌಶಲ್ಯ ತರಬೇತಿ ಕೇಂದ್ರಗಳು ಹಾಗೂ ಉದ್ಯೋಗ ಸಂಸ್ಥೆಗಳು ಭಾಗವಹಿಸಲಿದ್ದು, ಉದ್ಯೋಗಾಂಕ್ಷಿ ಯುವಕ /ಯುವತಿಯರಿಗೆ ಇದೊಂದು ಸುವರ್ಣಾವಕಾಶವಾಗಿದೆ. 18 ರಿಂದ 35 ವರ್ಷದ ವಯೋಮಾನದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು ಭಾಗವಹಿಸಬಹುದಾಗಿದೆ. ಉದ್ಯೋಗ ಮೇಳದಲ್ಲಿ ನೇರವಾಗಿ ಬಯೋಡೇಟಾ 10 ಪ್ರತಿಗಳು ಹಾಗೂ ಶೈಕ್ಷಣಿಕ ದಾಖಲಾತಿಗಳೊಂದಿಗೆ ಹಾಜರಾಗಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಪ್ರಮುಖವಾಗಿ ಜೆ.ಕೆ.ಟೈರ್ಸ್, ಏಷಿಯನ್ ಪೇಂಟ್ಸ್, ರಾಣೆ ಮಾಡ್ರಸ್, ರೈಟ್ ವೇ, ಸನ್ ಬಿಗ್ನೆಸ್, ಭಾರತ್ ಫೈನಾಸ್, ಮುತ್ತೂಟ್ ಫೈನಾಸ್ ಸೇರಿದಂತೆ ಖ್ಯಾತ ಕಂಪನಿಗಳು ಭಾಗಿಯಾಗಲಿವೆ. ಉದ್ಯೋಗಾಕಾಂಕ್ಷಿಗಳ ನೋಂದಣಿಗಾಗಿ ಮೂರು ಕೌಂಟರ್‌ಗಳನ್ನು ತೆರೆಯಲಾಗಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಸ್ವಯಂ ಸೇವಕರು ನೋಂದಣಿ ಕಾರ್ಯ ನಡೆಸಲಿದ್ದಾರೆ. ಈಗಾಗಲೇ ಆನ್‌ಲೈನ್ ಮೂಲಕ 500ಕ್ಕೂ ಹೆಚ್ಚು ಜನ ನೋಂದಾಯಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಒಟ್ಟಾರೆ 8 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮ ಯಶಸ್ವಿಗೊಳಿಸುವ ಉದ್ದೇಶದಿಂದ ಆಹಾರ ಸಮಿತಿ, ಆರೋಗ್ಯ ಸಮಿತಿ, ಉದ್ಯೋಗ ಸಮಿತಿ ನಾನಾ ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ. ಸತತ ಒಂದು ತಿಂಗಳಿಂದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಭಾಗಿಯಾಗುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಶೌಚಗೃಹ, ಕುಡಿಯುವ ನೀರು ಸೇರಿದಂತೆ ಭಾಗವಹಿಸುವವರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಿಎಂಟಿಸಿ ಕೂಡ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿದೆ. ಹೊರಗುತ್ತಿಗೆ ಆಧಾರದಲ್ಲಿ 500 ಜನ ಡ್ರೈವರ್‌ಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಬಿಎಂಟಿಸಿ ಕೂಡ ಎರಡು ಸ್ಟಾಲ್ ಪಡೆದಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಚಾಮರಾಜ ವಿಧಾನಸಭಾ ಕ್ಷೇತ್ರದ 500 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರದ ವಿತರಣೆ ಮಾಡಲಾಗುತ್ತದೆ. ಹಾಗಾಗಿ, ಕ್ಷೇತ್ರ ವ್ಯಾಪ್ತಿಯ ತಲಾ ಒಂದು ವಾರ್ಡಿನ ಒಬ್ಬೊಬ್ಬರಿಗೆ ತಳ್ಳುವಗಾಡಿ ವಿತರಣೆ ಮಾಡಲಾಗುತ್ತದೆ. ಜತೆಗೆ ಭಾಗವಹಿಸುವ ಎಲ್ಲರಿಗೂ ಆಯುರ್ವೇದ ಗುಣ ಹೊಂದಿರುವ ಗಿಡಗಳನ್ನು ಸಹ ಉಚಿತವಾಗಿ ವಿತರಣೆ ಮಾಡಲಾಗುತ್ತದೆ ಎಂದು ರವಿ ಮಂಚೇಗೌಡನಕೊಪ್ಪಲು ಮಾಹಿತಿ ನೀಡಿದರು.
ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಮಾದೇಶ್ ಮಾತನಾಡಿ, ಬೃಹತ್ ಆರೋಗ್ಯ ಮೇಳದಲ್ಲಿ ರಕ್ತ ಗುಂಪು ಪರೀಕ್ಷಿಸಿ ಕಾರ್ಡ್ ವಿತರಣೆ ಮಾಡಿಕೊಡಲಾಗುತ್ತದೆ. ಹೃದ್ರೋಗ ಸಮಸ್ಯೆ, ಮಧುಮೇಹ ಸಮಸ್ಯೆ, ನರರೋಗ ಸಮಸ್ಯೆ, ಮೂತ್ರಪಿಂಡ (ಕಿಡ್ನಿ) ಸಮಸ್ಯೆ, ಲಿವರ್ ತಪಾಸಣೆ, ಕಣ್ಣಿನ ಪರೀಕ್ಷೆ, ದಂತವೈದ್ಯ ಚಿಕಿತ್ಸೆ, ಕಿವಿ, ಮೂಗು, ಗಂಟಲು ಸಮಸ್ಯೆ, ಕೀಲು ಮತ್ತು ಮೂಳೆ ಸಮಸ್ಯೆ, ಪಿತ್ತಜನಕಾಂಗದ ಸಮಸ್ಯೆ, ಗರ್ಭಿಣಿ ಮತ್ತು ಸ್ತ್ರೀರೋಗ ಸಮಸ್ಯೆ, ಚರ್ಮ ರೋಗ ಸಮಸ್ಯೆ, ಮಾನಸಿಕ ರೋಗ ಸಮಸ್ಯೆ, ಮಕ್ಕಳ ಚಿಕಿತ್ಸೆ, ಕ್ಯಾನ್ಸರ್ ತಪಾಸಣೆ, ಮೂಳೆ ಸಾಂದ್ರತೆ ತಪಾಸಣೆ ನಡೆಯಲಿದೆ.
ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ನೆಫ್ರೋ-ಯುರಾಲಜಿ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಆಸ್ಪತ್ರೆ, ಕಿದ್ವಾಯಿ, ಜೆಎಸ್‌ಎಸ್ ಆಸ್ಪತ್ರೆ, ಸುಯೋಗ್ ಆಸ್ಪತ್ರೆ, ಬಿಜಿಎಸ್ ಅಪೋಲೋ, ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ 40ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆ ಹಾಗೂ ವಿವಿಧ ಸಂಸ್ಥೆಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.
ವಿಶೇಷ ವಾಹನದಲ್ಲಿ ಕಿವಿ ತಪಾಸಣೆ ನಡೆಯಲಿದೆ. ಸದರಿ ವಾಹನ ಒಂದು ವಾರಗಳ ಕಾಲ ಚಾಮರಾಜಕ್ಷೇತ್ರದ ಮೂಲೆ ಮೂಲೆಗೆ ತೆರಳಿ ಸಾರ್ವಜನಿಕರ ಕವಿ ತಪಾಸಣೆ ನಡೆಸಲಿದೆ ಎಂದು ಮಾಹಿತಿ ನೀಡಿದರು.
ಮುಖಂಡರಾದ ರಮೇಶ್ ರಾಯಪ್ಪ, ಯೋಗೇಶ್, ಅನಂತ, ನಾಗೇಶ್ ಇತರರಿದ್ದರು.