

ಮೈಸೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಮಾನತೆ, ಭ್ರಾತೃತ್ವ ಹಾಗೂ ಸ್ವಾತಂತ್ರೃಕ್ಕಾಗಿ ‘ಪ್ರಜಾಪ್ರಭುತ್ವ’ ಎನ್ನುವ ಧ್ಯೇಯವಾಕ್ಯದೊಂದಿಗೆ ಬೃಹತ್ ಮಾನವ ಸರಪಳಿ ರಚಿಸಲಾಯಿತು.
ಮೈಸೂರು ಜಿಲ್ಲೆಯ ಗಡಿ ಸಿದ್ದಲಿಂಗಪುರದಿಂದ ಮೈಸೂರು-ತಿ.ನರಸೀಪುರ ಮಾರ್ಗವಾಗಿ ಚಾಮರಾಜನಗರದವರೆವಿಗೂ 58 ಕಿ.ಮೀ. ಉದ್ದ ಪ್ರಜಾಪ್ರಭುತ್ವ ಗಟ್ಟಿಗೊಳಿಸುವುಕ್ಕಾಗಿ ಕೈ ಜೋಡಿಸಿದ 60 ಸಾವಿರಕ್ಕೂ ಹೆಚ್ಚು ಜನರು, ಕೈ- ಕೈ ಹಿಡಿದಿದ್ದಲ್ಲದೆ ತಮ್ಮ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಹಿಡಿದು ಜೈಹಿಂದ್, ಜೈ ಕರ್ನಾಟಕ ಎಂಬ ಘೋಷಣೆ ಕೂಗುವ ಮೂಲಕ ಏಕತೆ ಮೆರೆದರು.
ಮೈಸೂರು ತಾಲೂಕಿನ ಕಳಸ್ತವಾಡಿ, ಸಿದ್ದಲಿಂಗಪುರದಿಂದ ಪ್ರಾರಂಭವಾಗಿ ಮಣಿಪಾಲ್ ಆಸ್ಪತ್ರೆ, ಫೌಂಟನ್ ವೃತ್ತ, ಗಾಂಧಿ ನಗರದ ಅಂಬೇಡ್ಕರ್ ವೃತ್ತ, ಅಶೋಕರಸ್ತೆ, ಟೌನ್‌ಹಾಲ್, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಹಾರ್ಡಿಂಜ್ ಸರ್ಕಲ್, ಮೃಗಾಲಯ, ರೇಸ್ ಕೋರ್ಸ್ ವೃತ್ತ, ಸಂಗೊಳ್ಳಿ ರಾಯಣ್ಣ ಸರ್ಕಲ್, ಕಮಾನ್‌ಗೇಟ್, ರಿಂಗ್‌ರಸ್ತೆ, ವರುಣ ಗ್ರಾಮ, ಕೀಳನ ಪುರ, ಕೆಂಪಯ್ಯನ ಹುಂಡಿ, ಇಂಡುವಾಳು, ಗರ್ಗೇಶ್ವರಿ, ತಿ.ನರಸೀಪುರ ಟೌನ್, ಗಂಜಾಂ ನರಸಿಂಹ ಸ್ವಾಮಿ ದೇವಸ್ಥಾನ, ಅಲಗೂಡು, ಕುರಬೂರು, ಮಾಡ್ರಳ್ಳಿ ಗೇಟ್, ಮೂಗೂರು ಗ್ರಾಮದ ಮೂಲಕ ಚಾಮರಾಜನಗರ ಜಿಲ್ಲೆವರೆವಿಗೂ ಕೈ -ಕೈ ಹಿಡಿದ ಮಾನವ ಸರಪಳಿ ರಚಿಸಲಾಗಿತ್ತು.
ಬೆಳಗ್ಗೆ 9.30 ರಿಂದ ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸರತಿ ನಿಂತರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಆಯೋಜಿಸಿದ್ದ ವೇದಿಕೆಯಲ್ಲಿ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾವನೆ ಓದಲಾಯಿತು. ಬಳಿಕ ಮಾನವ ಸರಪಳಿಯಲ್ಲಿ ಕೈ, ಕೈ ಹಿಡಿದು ನಿಂತವರು ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ಜೈಹಿಂದ್, ಜೈ ಕರ್ನಾಟಕ ಎಂದು ಏಕಕಾಲದಲ್ಲಿ ಜಯಘೋಷ ಮೊಳಗಿಸುವ ಮೂಲಕ ಸರಪಳಿ ಕಳಚಿದರು. ಮಾನವ ಸರಪಳಿ ರಚನೆಯಲ್ಲಿ ಜಿಲ್ಲೆಯ ನಾನಾ ಸಂಘಟನೆಗಳು, ಜನಪ್ರತಿನಿಧಿಗಳು, ಸಮುದಾಯದ ಮುಖಂಡರು, ಶಾಲೆ- ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್, ಗೈಡ್ಸ್, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಹೋಟೆಲ್, ಬೇಕರಿ ಸಿಬ್ಬಂದಿ, ನರ್ಸಿಂಗ್, ಸರ್ಕಾರದ ವಿವಿಧ ಇಲಾಖೆಯ ಸಿಬ್ಬಂದಿ ಸೇರಿದಂತೆ ನಾನಾ ಸಂಘಟನೆಯವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.