

ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಬಲ್ಲರಾಯನದುರ್ಗದ ಕೆಳಭಾಗದಿಂದ ಗುರುವಾರ ರಾತ್ರಿ ಭಾರಿ ಸ್ಫೋಟದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಕಂಪನದ ಅನುಭವದ ಬಗ್ಗೆ ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಹಾದು ಬರುವ ಏಳುವರೆ ಹಳ್ಳದಲ್ಲಿ ಮಣ್ಣುಮಿಶ್ರಿತ ನೀರು ಬರುತ್ತಿರುವುದಾಗಿ ಸ್ಥಳೀಯ ನಿವಾಸಿ ಕೇಶವ ಎಂಬುವರು ಮಾಹಿತಿ ನೀಡಿದ್ದಾರೆ. ಮಕ್ಕಿ, ಪರ್ಲ, ದೈಪಿತ್ತಿಲು, ಎಲ್ಯರಕಂಡ ಸುತ್ತಮುತ್ತ 16ಕ್ಕೂ ಅಧಿಕ ಮನೆಗಳಿವೆ. 2019ರ ಆಗಸ್ಟ್ ಅವಧಿಯಲ್ಲಿ ಈ ಪ್ರದೇಶದಲ್ಲಿ ಭಾರಿ ಭೂ ಕುಸಿತ ಉಂಟಾಗಿ 40ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಿ ಬೇರೆಡೆ ಆಶ್ರಯ ನೀಡಲಾಗಿತ್ತು.
ಈ ಪ್ರದೇಶ 250 ಹೆಕ್ಟೇರ್‌ಗೂ ಅಧಿಕ ಕೃಷಿ ಭೂಮಿ ಹೊಂದಿದ್ದು, ಮೂರು ವಷರ್ಗಳ ಹಿಂದೆ ಭೂ ಕುಸಿತ ಉಂಟಾದ ಬಳಿಕ ಅರಣ್ಯ ಇಲಾಖೆ ಇಲ್ಲಿನ ಕುಟುಂಬಗಳನ್ನು ಪರಿಹಾರ ಒದಗಿಸಿ ಸ್ಥಳಾಂತರಿಸಲು ನಿರ್ಧರಿಸಿತ್ತು. ಈ ನೆಲೆಯಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಸರ್ವೇ ಮಾಡಿದ್ದರೂ ಬಳಿಕ ಸ್ಪಂದನೆ ನೀಡದೆ ಮೌನ ವಹಿಸಿತ್ತು. ಇದರಿಂದ ಇಲ್ಲಿನ ಜನ ಅತ್ತ ಸ್ಥಳಾಂತರವೂ ಆಗದೆ ಇತ್ತ ಅಲ್ಲಿಯೂ ವಾಸಿಸಲು ಆಗದೆ ಭಯದಲ್ಲೇ ಕಾಲ ಕಳೆಯುವಂತಾಗಿದೆ.
ಎರಡು ದಿನಗಳಿಂದ ಘಟ್ಟ ಪ್ರದೇಶದ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಈಗ ಮಲವಂತಿಗೆ ಸಮೀಪ ಬಲ್ಲರಾಯನದುರ್ಗದ ಭಾಗದಲ್ಲಿ ಭೂಕುಸಿತ ಉಂಟಾಗಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ನದಿ ಹಳ್ಳಗಳಲ್ಲಿ ರಭಸವಾಗಿ ನೀರು ಹರಿಯುವಾಗ ಬಂಡೆಗಳು ನೀರಿನ ಜತೆ ಕೊಚ್ಚಿಕೊಂಡು ಹೋಗುವಾಗಲೂ ಇಂಥ ಸದ್ದು, ಕಂಪನದ ಅನುಭವ ಉಂಟಾಗುತ್ತದೆ. ಭೂ ಕುಸಿತದ ಬಗ್ಗೆ ಇದುವರೆಗೆ ಮಾಹಿತಿ ಇಲ್ಲ. ನಮ್ಮ ತಂಡ ಗ್ರಾಮದ ಸುತ್ತ ಅಪಾಯಕಾರಿ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದು, ಹೆಚ್ಚಿನ ನಿಗಾ ವಹಿಸಿದೆ ಎಂದು ಮಲವಂತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿನೇಶ್ ಗೌಡ ವಿಜಯವಾಣಿಗೆ ತಿಳಿಸಿದ್ದಾರೆ.