

ಹುನಗುಂದ: ಚಿತ್ತರಗಿ ಸಂಸ್ಥಾನ ಮಠದ ಮಹಾಂತ ಜೋಳಿಗೆಯ ಶಿವಶಿಲ್ಪಿಗಳು, ಬಸವತತ್ವದ ಹರಿಕಾರ ಲಿಂ.ಡಾ.ಮಹಾಂತ ಸ್ವಾಮಿಗಳ 95ನೇ ಜನ್ಮ ದಿನ ಪ್ರಯುಕ್ತ ರಕ್ತ ಗುಂಪು ತಪಾಸಣೆ, ಬೃಹತ್ ರಕ್ತದಾನ ಶಿಬಿರನ್ನು ಆ.1 ರಂದು ಬೆಳಗ್ಗೆ 9.30 ರಿಂದ 3 ವರೆಗೆ ಬಸವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿ.ಮ.ವಿ.ವ ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಹೇಳಿದರು.
ಪಟ್ಟಣದ ವಿ.ಮ.ವಿ.ವ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ಬಸವಕೇಂದ್ರ ವಿಜಯಮಹಾಂತೇಶ ಸಹಕಾರಿ ಬ್ಯಾಂಕ್, ತಾಲೂಕು ಪತ್ರಕರ್ತರ ಸಂಘ ಮತ್ತು ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದೆ ಎಂದರು.
ಚಿತ್ತರಗಿ ಸಂಸ್ಥಾನಮಠದ ಹುನಗುಂದದ ಗುರುಮಹಾಂತ ಸ್ವಾಮಿಗಳು, ಶಿರೂರಿನ ಮಹಾಂತ ತೀರ್ಥದ ಡಾ.ಬಸವಲಿಂಗ ಸ್ವಾಮಿಗಳು, ವಿಮವಿವ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ, ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಜಿ.ಎ.ಮೂಲಿಮನಿ, ಹಿರಿಯ ದಿವಾನಿ ನ್ಯಾಯಾಧೀಶ ಹನಮಂತರಾವ್ ಕುಲಕರ್ಣಿ, ಪ್ರಧಾನ ದಿವಾನಿ ನ್ಯಾಯಾಧೀಶ ಬಸವರಾಜ ನೇಸರಗಿ, ಅಪರ ದಿವಾನಿ ಮಹಾಂತೇಶ ಮಠದ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಾಲಪ್ಪ ಕಿರಸೂರ ಪಾಲ್ಗೊಳ್ಳಲಿದ್ದಾರೆ.
ರಕ್ತದಾನವು ಮಾನವೀಯತೆಯಿಂದ ಕೂಡಿದ ದಾನವಾಗಿದೆ. ಯುವಕರು, ಆರೋಗ್ಯವಂತ ಪುರುಷ, ಮಹಿಳೆಯರು ಪ್ರತಿ 1 ವರ್ಷಕೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಮನುಷ್ಯನಿಗೆ ಆಕಸ್ಮಿಕವಾಗಿ ಬರಬಹುದಾದ ಕ್ಯಾನ್ಸರ್, ಕೊಲೆಸ್ಟಾಲ್, ಹೃದಯಾಘಾತ ತಪ್ಪಿಸುತ್ತದೆ. 18ರಿಂದ 60 ವರ್ಷದೊಳಗಿನ ಎಲ್ಲ ಆರೋಗ್ಯ ವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಆದ್ದರಿಂದ ಹೆಚ್ಚಿನ ಜನರು ಪಾಲ್ಗೊಂಡು ರಕ್ತ ದಾನ ಮಾಡಿರಿ ಎಂದು ತಿಳಿಸಿದರು.
ವಿ.ಮ.ವಿ.ವ ಸಂಘದ ನಿರ್ದೇಶಕ .ಡಾ. ಶಿವಶಂಕರ ಮುದಗಲ್, ಬಸವರಾಜ ಕೆಂದೂರ, ವೀರಣ್ಣ ಬಳುಟಗಿ,ದೇಸಾಯಪ್ಪ ಹವಾಲ್ದಾರ, ಎಂ.ಎಸ್.ಮಠ, ವಿ.ಮ. ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಸಂಗಣ್ಣ ಚಿನಿವಾಲರ, ಎಸ್.ಎನ್.ಹಾದಿಮನಿ ಆಡಳಿತಾಧಿಕಾರಿ ಆರ್.ಎಸ್.ಬ್ಯಾಳಿ ಇದ್ದರು.