ರಕ್ತದಾನದಿಂದ ಅನ್ಯರ ಜೀವ ರಕ್ಷಣೆ...

Blood Camp
Published on

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಭಿಮತ

ಉಡುಪಿಯಲ್ಲಿ ಬೃಹತ್​ ಶಿಬಿರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಒಂದು ಬಾರಿ ರಕ್ತದಾನ ಮಾಡುವುದರಿಂದ ಮೂರು ಜನರ ಜೀವ ಉಳಿಸಲು ಸಾಧ್ಯ. ಹೀಗಾಗಿ ರಕ್ತದಾನ ಮಹಾದಾನವಾಗಿದ್ದು, ಆಪತ್ತಿನಲ್ಲಿರುವ ಮತ್ತೊಬ್ಬರ ಜೀವ ಉಳಿಸುವಂತಹ ಮಹತ್​ ಕಾರ್ಯಕ್ಕಾಗಿ ಹೆಚ್ಚು ಜನರು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಕರೆ ನೀಡಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ.) ಉಡುಪಿ ಜಿಲ್ಲಾ ಶಾಖೆ, ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರ ಹಾಗೂ ರಕ್ತನಿಧಿ ಕೇಂದ್ರ ಕೆಎಂಸಿ ಮಣಿಪಾಲದ ಆಶ್ರಯದಲ್ಲಿ ಜೂನ್​ 27ರಂದು ಆಯೋಜಿಸಿದ್ದ ಬೃಹತ್​ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ರಕ್ಷಣೆಯ ಮೂಲ

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ ಅಂಪಾರು ಪ್ರಾಸ್ತಾವಿಕವಾಗಿ ಮಾತನಾಡಿ, ರಕ್ತದಾನವು ಆಧುನಿಕ ಆರೋಗ್ಯ ರಕ್ಷಣೆಯ ಮೂಲಾಧಾರ. ಪ್ರತಿದಿನ ನೂರಾರು ಜನರ ಜೀವ ಉಳಿಸುವಲ್ಲಿ ಅನಿವಾರ್ಯ ಪಾತ್ರ ವಹಿಸುತ್ತದೆ. ಜನಸಾಮಾನ್ಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.

ರಕ್ತಕ್ಕಿಲ್ಲ ಜಾತಿ-ಧರ್ಮ

ಜಿಲ್ಲಾ ಸರ್ಜನ್​ ಡಾ. ಅಶೋಕ ಎಚ್​. ಮಾತನಾಡಿ, ರಕ್ತಕ್ಕೆ ಯಾವುದೇ ಜಾತಿ-ಧರ್ಮವಿಲ್ಲ. ಸಂಗ್ರಹವಾದ ಕೆಂಪು ರಕ್ತಕಣಗಳನ್ನು 35 ದಿನದವರೆಗೆ, ಪ್ಲೇಟ್​ಲೆಟ್​ಗಳನ್ನು 7 ದಿನ ಹಾಗೂ ಹಾಗೂ ಪ್ಲಾಸ್ಮಾವನ್ನು 1 ವರ್ಷದ ಮಿತಿಯೊಳಗೆ ಬಳಸಬೇಕು. ಪ್ರತಿದಿನ ರಕ್ತ ಪೂರೈಸಲು ನಿರಂತರ ರಕ್ತದಾನ ಅಗತ್ಯ ಎಂದರು.

ದಾನಿಗಳಿಗೆ ಸನ್ಮಾನ

ಮಣಿಪಾಲ ಕೆಎಂಸಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಶಮಿ ಶಾಸ್ತ್ರಿ ಮಾತನಾಡಿ, ಯಾರು ರಕ್ತದಾನ ಮಾಡಬಹುದು ಎಂಬ ಮಾಹಿತಿ ನೀಡಿದರು. ಅನೇಕ ಬಾರಿ ರಕ್ತದಾನ ಮಾಡಿದ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ದಿವಾಕರ, ಯುವ ಸಬಲೀಕರಣ ಇಲಾಖೆಯ

ಮಂಜುನಾಥ, ಕಂದಾಯ ಇಲಾಖೆಯ ಯತೀಶ ಕಿದಿಯೂರು, ಸ್ವಾತಿ, ಲಾವಣ್ಯಾ, ಲತಾ ಇತರರನ್ನು ಸನ್ಮಾನಿಸಲಾಯಿತು.

ಶಿಬಿರದಲ್ಲಿ 101 ಯೂನಿಟ್​ ರಕ್ತ ಸಂಗ್ರಹಿಸಲಾಯಿತು. ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಇಂದಿನ ಶಿಬಿರದಲ್ಲಿ 100ಕ್ಕೂ ಹೆಚ್ಚು ಜನ ಉತ್ಸಾಹದಿಂದ ರಕ್ತದಾನ ಮಾಡಿದ್ದಾರೆ. ಇಲ್ಲಿ ಒಂದೇ ಸೂರಿನಡಿ ಹೆಚ್ಚು ಕಚೇರಿ ಇರುವುದರಿಂದ ಎಲ್ಲ ಇಲಾಖೆಗಳು ಸೌಹಾರ್ದದಿಂದ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಲು ಸಹಕಾರಿಯಾಗಿದೆ. ಸರ್ಕಾರಿ ನೌಕರರು ತಮ್ಮ ಕೆಲಸದ ಒತ್ತಡದ ನಡುವೆಯೂ ರಕ್ತದಾನದ ಮೂಲಕ ಸಾಮಾಜಿಕ ಜವಾಬ್ದಾರಿ ನಿಭಾಯಿಸಿರುವುದು ಶ್ಲಾಘನೀಯ. | ಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ ವಿಶ್ವದಲ್ಲಿ ಪ್ರತಿ ಎರಡು ಸೆಕೆಂಡ್​ಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಹೀಗಾಗಿ ರಕ್ತದಾನಗಳು ದಿನಾಚರಣೆಗೆ ಸೀಮಿತವಾಗಬಾರದು. ಜನ್ಮದಿನ, ಶುಭ ಸಂದರ್ಭ ಹಾಗೂ ಇನ್ನಿತರ ವಿಶೇಷ ಕಾರ್ಯಕ್ರಮಗಳಲ್ಲಿಯೂ ಸಹ ರಕ್ತದಾನ ಶಿಬಿರ ಹಮ್ಮಿಕೊಳ್ಳುವಂತಾಗಬೇಕು. | ಅಬೀದ್​ ಗದ್ಯಾಳ. ಅಪರ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net