

ವಿರಾಜಪೇಟೆ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಭಾನುವಾರ ವಿರಾಜಪೇಟೆಯ ಎಫ್‌ಎಂಸಿ ರಸ್ತೆಯಲ್ಲಿರುವ ಟೀಚರ್ಸ್ ಸ್ಟೋರ್ ಕಟ್ಟಡ ಸಭಾಂಗಣದಲ್ಲಿ ಸಹಾರ ಫ್ರೆಂಡ್ಸ್ ವಿರಾಜಪೇಟೆ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಇಂದಿನ ಯುಗದಲ್ಲಿ ರಕ್ತದಾನ ಎಲ್ಲ ದಾನಗಳಲ್ಲಿಯೂ ಶ್ರೇಷ್ಠ ಎನಿಸಿಕೊಂಡಿದೆ. ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವಕ್ಕೆ ಅಮೂಲ್ಯ ಬೆಲೆ ಕೊಡುವುದರೊಂದಿಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಇಂತಹ ಉತ್ತಮ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿಯನ್ನು ಮೂಡಿಸುವಂತಿದ್ದು, ಇದರಿಂದ ಸಮಾಜ ಉತ್ತಮ ದಿಕ್ಕಿನಲ್ಲಿ ಚಲಿಸುವುದಕ್ಕೆ ಸಹಾಯವಾಗಲಿದೆ ಎಂದು ಬಣ್ಣಿಸಿದರು.
ರಕ್ತದಾನ ಶಿಬಿರದ ಪ್ರಯುಕ್ತ 70 ಬಾರಿ ರಕ್ತದಾನ ಮಾಡಿದ ರವಿಕುಮಾರ್ ಹಾಗೂ 25 ಬಾರಿ ರಕ್ತದಾನ ಮಾಡಿದ ಗೋಣಿಕೊಪ್ಪದ ಪ್ರಿಯ ಸುರೇಂದ್ರ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು. ಸಹಾರ ಫ್ರೆಂಡ್ಸ್ ಸಂಸ್ಥೆಯ ಇರ್ಷಾದ್, ಶ್ರೀಕಾಂತ್ ಶೆಟ್ಟಿ, ಝಿಯಾ ಉಲ್ಲಾ,ಅನಿಲ್ ಅಪ್ಪು, ಜೀವನ್ ಪಿಂಟೋ, ಸಮಿವುಲ್ಲ, ಮಹಮ್ಮದ್ ಜೇನ್, ಪುರಸಭೆ ಅಧ್ಯಕ್ಷ ದೇಚಮ್ಮ ಕಾಳಪ್ಪ, ಪುರಸಭೆ ಸದಸ್ಯರು ಹಾಗೂ ಕಾರ್ಯಕ್ರಮ ಆಯೋಜಕರು ಹಾಗೂ ಪಕ್ಷದ ಪ್ರಮುಖರು ಇದ್ದರು.