

ಹಿರಿಯೂರು: ನಗರದಲ್ಲಿ ಸೋಮವಾರ ಆಯೋಜಿಸಿದ್ದ ಜನತಾದರ್ಶದಲ್ಲಿ ಸ್ಥಳದಲ್ಲೇ 35 ಮಂದಿಗೆ ಮಾಸಾಶನ ಮಂಜೂರಾತಿಗೆ ಸಚಿವ ಡಿ.ಸುಧಾಕರ್ ಸಮ್ಮತಿ ಸೂಚಿಸಿದರು.
ಸಂಧ್ಯಾ ಸುರಕ್ಷಾ ಸೇರಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನ ಮಂಜೂರು ಮಾಡಬೇಕೆಂದು ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಿದ 35 ಫಲಾನುಭವಿಗಳಿಗೆ ಅಧಿಕಾರಿಗಳು ಮಾಸಾಶನ ಮಂಜೂರು ಮಾಡಿದಷ್ಟೇ ಅಲ್ಲದೆ ಸಚಿವರು ಆದೇಶ ಪತ್ರ ವಿತರಿಸಿ ಗಮನಸೆಳೆದರು.
ಜನತಾ ದರ್ಶನದಲ್ಲಿ 325 ಅರ್ಜಿಗಳು ಸಲ್ಲಿಕೆಯಾದವು. ಇವುಗಳಲ್ಲಿ ಪ್ರಮುಖವಾಗಿ ರೈತರಿಂದ ಭೂಮಿ ಸಾಗುವಳಿ ಚೀಟಿ ನೀಡುವುದು, ನಿವೇಶನ, ಮನೆ ಮಂಜೂರಾತಿ, ಗ್ರಾಮಗಳಿಗೆ ಮೂಲ ಸೌಕರ್ಯ, ಕುಡಿವ ನೀರು, ಕೊಳವೆಬಾವಿ ಕೊರೆಯಿಸುವುದು, ಗಂಗಾಕಲ್ಯಾಣ ಯೋಜನೆ, ವಿದ್ಯುತ್ ಪರಿವರ್ತಕ ದುರಸ್ತಿ, ವಿದ್ಯುತ್ ಲೈನ್ ಮಾರ್ಗ ನಿರ್ವಹಣೆ, ಜಮೀನು ರಸ್ತೆ, ಕೆರೆ ಒತ್ತುವರಿ ತೆರವು, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನ ಇತರ ವಿಷಯಗಳ ಕುರಿತು ಅರ್ಜಿ ಸಲ್ಲಿಕೆಯಾದವು.